ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್‍ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ.
ಪಿತೋರ್‌ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು ಮುನ್ಸಿಯರಿ ಜನರು ಸಂಗ್ರಹಿಸುತ್ತಾರೆ. ಕೀಡಾ ಜಾಡಿ ಅಥವಾ ಹಿಮಾಲಯದ ವಯಾಗ್ರಾ ಸಸ್ಯ ಕಾಮೋತ್ತೇಜಕ ಮಾತ್ರೆಗಳ ರೀತಿಯಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆಜಿ ‘ಕೀಡಾ ಜಾಡಿ’ಯ ಬೆಲೆ 18 ಲಕ್ಷ ರೂ. ಇದೆ. ಇದು ಬೇಸಿಗೆ ಕಾಲದಲ್ಲಿ ಮಾತ್ರ ಬೆಳೆಯುತ್ತದೆ.
ಬುಯಿ ಮತ್ತು ಪಾಟೋ ಗ್ರಾಮಗಳ ಜನರು ರಾಲಂ ಹುಲ್ಲುಗಾವಲು ಪ್ರದೇಶ ತಮಗೇ ಸೇರಿದ್ದು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ ವಯಾಗ್ರವನ್ನು ಯಾರೂ ಮುಟ್ಟದಂತೆ ಕಾವಲು ಕಾಯುತ್ತಿದ್ದಾರೆ. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪರಸ್ಪರ ಒಮ್ಮತದಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಜಿಲ್ಲಾಡಳಿತವು ಎರಡೂ ಗ್ರಾಮದ ಜನರಿಗೆ ಸೂಚನೆ ನೀಡಿತ್ತು.
ಸ್ವತಃ ಜಿಲ್ಲಾಧಿಕಾರಿಗಳು ಎರಡೂ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಕಿತ್ತಾಟ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಗ್ರಾಮಸ್ಥರ ಮಧ್ಯೆ ಸಮಸ್ಯೆ ಇತ್ಯರ್ಥವಾಗದ ಹಿನ್ನಲೆಯಲ್ಲಿ ಹಿಮಾಲಯದ ಗುಡ್ಡಾಗಾಡು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.