ಸಿಹಿ ತಿಂಡಿಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಬಾದುಶ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಎಲ್ಲಾ ವಯೋಮಾನದವರು ಸಹ ಇಷ್ಟ ಪಡುತ್ತಾರೆ. ನೀವೂ ಮನೆಯಲ್ಲೇ ಬಿಸಿಯಾದ ರುಚಿಯಾದ ಬಾದುಶವನ್ನು ತಯಾರಿಸಬಹುದು. ತಿಳಿಯಲು ಮುಂದೆ ಓದಿ…
ಬೇಕಾಗುವ ಪದಾರ್ಥಗಳು…
- ಮೈದಾಹಿಟ್ಟು – 2 ಬಟ್ಟಲು
- ಅಡುಗೆ ಸೋಡಾ – ಚಿಟಿಕೆ
- ಮೊಸರು- ಕಾಲು ಬಟ್ಟಲು
- ಏಲಕ್ಕಿ ಪುಡಿ- ಸ್ವಲ್ಪ
- ಡಾಲ್ಡಾ (ತುಪ್ಪ) – ಅರ್ಧ ಬಟ್ಟಲು
- ಎಣ್ಣೆ – ಕರಿಯಲು
- ಸಕ್ಕರೆ – 1 1/2 ಬಟ್ಟಲು
ಮಾಡುವ ವಿಧಾನ…
- ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಅಡುಗೆ ಸೋಡಾ, ಮೊಸರು ಹಾಗೂ ತುಪ್ಪವನ್ನು ಹಾಕಿ ಚಪಾತಿ ಹಿಟ್ಟಿನಂತೆ ಮಾಡಿಕೊಳ್ಳಬೇಕು.
- ಮತ್ತೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಸಕ್ಕರೆಯನ್ನು ಹಾಕಿ ಎಳೆ ಪಾಕ ಮಾಡಿಕೊಳ್ಳಬೇಕು. ಪಾಕ ತಯಾರಾದ ಬಳಿಕ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಬೇಕು.
- ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು.
- ನಂತರ ಈ ಹಿಂದೆಯೇ ಮಾಡಿಟ್ಟುಕೊಂಡ ಹಿಟ್ಟನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಚಿಕ್ಕ ಗಾತ್ರಕ್ಕೆ ತಟ್ಟಿ, ಉಂಡೆ ಮಧ್ಯೆ ಬೆರಳಿನಿಂದ ಹಳ್ಳ ಮಾಡಬೇಕು. (ಹಳ್ಳ ಮಾಡುವುದರಿಂದ ಎಣ್ಣೆಗೆ ಹಾಕಿದಾಗ ಉಂಡೆಗಳು ಒಳಗಿನಿಂದ ಚೆನ್ನಾಗಿ ಬೇಯಲು ಸಹಾಯವಾಗುತ್ತದೆ).
- ಎಣ್ಣೆಯನ್ನು ಬಹಳ ಕಾಯಿಸಬಾರದು. ಸ್ವಲ್ಪ ಎಣ್ಣೆ ಕಾದ ನಂತರ ಸಣ್ಣ ಉರಿಯಲ್ಲಿಯೇ ಮಾಡಿಟ್ಟುಕೊಂಡ ಉಂಡೆಗಳನ್ನು ಹಾಕಿ ಕೆಂಪಗೆ ಕರಿಯಬೇಕು. ನಂತರ ಪಾಕಕ್ಕೆ ಇದನ್ನು ಹಾಕಿ 5 ನಿಮಿಷಗಳ ನಂತರ ತೆಗೆದರೆ ರುಚಿಕರವಾದ ಬಾದುಷ ಸವಿಯಲು ಸಿದ್ಧ.