ಸುದ್ದಿ

ರಾಜ್ಯ ಸರ್ಕಾರದ ಖಡಕ್ ಎಚ್ಚರಿಕೆ :2ನೇ ತರಗತಿವರೆಗೂ ಹೋಂ ವರ್ಕ್‌ ನೀಡುವಂತಿಲ್ಲ…..!

By admin

June 03, 2019

ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂವರ್ಕ್‌ ನೀಡುವ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಖಡಕ್‌ ಎಚ್ಚರಿಕೆ ನೀಡಿದೆ.2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಾಗಲೇ ಆರಂಭವಾಗಿವೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೆಚ್ಚಿನ ಹೋಂವರ್ಕ್‌ ನೀಡಲಾಗುತ್ತಿದೆ. ಇದು ಪಾಲಕ, ಪೋಷಕರಿಗೆ ನೇರ ಹೊರೆಯಾಗಲಿದೆ.

ಅಲ್ಲದೆ, ಈ ಮಕ್ಕಳ ಹೋಂ ವರ್ಕ್‌ನ್ನು ಮನೆಯಲ್ಲಿ ಪಾಲಕ, ಪೋಷಕರೇ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್‌ ನೀಡಬಾರದು ಎಂದು ಮೇ 3ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ರಾಜ್ಯ ಸರ್ಕಾರಕ್ಕೆ ಹೊಸ ನಿರ್ದೇಶನ ನೀಡಿದೆ. ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್‌ ನೀಡುವ ಹಾಗೂ 1ರಿಂದ 5ನೇ ತರಗತಿ ಮಕ್ಕಳಿಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿದ ಪಠ್ಯ ಹೊರತುಪಡಿಸಿ ಇನ್ಯಾವುದೋ ಪಠ್ಯ ಬೋಧನೆ ಮಾಡುವ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಬಹುದು ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಎನ್‌ಸಿಇಆರ್‌ಟಿ ನಿಗದಿಪಡಿಸಿರುವ ಭಾಷೆ ಮತ್ತು ಗಣಿತ ವಿಷಯ ಹಾಗೂ 3ರಿಂದ 5ನೇ ತರಗತಿ ಮಕ್ಕಳಿಗೆ ಭಾಷೆ, ಪರಿಸರ ವಿಜ್ಞಾನ ಹಾಗೂ ಗಣಿತ ಹೊರತುಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸಬಾರದು ಎಂದು ಖಡಕ್‌ ಎಚ್ಚರಿಕೆ ನೀಡಿದೆ.

ಎನ್‌ಸಿಇಆರ್‌ಟಿ ನಿಗದಿಪಡಿಸಿರುವ ಪಠ್ಯ ವಿಷಯಗಳನ್ನು ಹೊರತುಪಡಿಸಿ, ಇನ್ಯಾವುದೇ ಪಠ್ಯಕ್ರಮ ನಿಗದಿಪಡಿಸಿಕೊಂಡು ಬೋಧಿಸುವ ಶಾಲೆಗಳ ಬಗ್ಗೆ ನಿಗಾ ವಹಿಸಲು ಹಾಗೂ ಶಾಲೆಗೆ ಭೇಟಿ ನೀಡಿ ಈ ಬಗ್ಗೆ ತಪಾಸಣೆ ನಡೆಸಲು ವಿಶೇಷ ತಂಡ ರಚನೆ ಮಾಡಿಕೊಳ್ಳಬೇಕು ಎಂದು ಇಲಾಖೆಯ ಆಯುಕ್ತರಿಗೆ, ಯೋಜನಾ ನಿರ್ದೇಶಕರಿಗೆ, ಉಪ ನಿರ್ದೇಶಕರಿಗೆ ಸರ್ಕಾರ ಸೂಚಿಸಿದೆ.