ಗರ್ಭಾವಸ್ಥೆಯಲ್ಲಿ ಅಪೌಷ್ಠಿಕತೆಯಿಂದಾಗಿ ಗರ್ಭಿಣಿಯ ಆರೋಗ್ಯ ಹಾಗೂ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬೆಳವಣಿಗೆಯಲ್ಲಿ ಹಲಾವಾರು ತೊಂದರೆಗಳು ಉಂಟಾಗಿ ಜನಿಸುವ ಮಗುವಿನ ತೂಕ ಕಡಿಮೆ ಇರುವುದು, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಮಾತೃಪೂರ್ಣ ಯೋಜನೆಯು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ.
ಏನಿದು ಮಾತೃಪೂರ್ಣ ಯೋಜನೆ ?
ತಾಯಿ ಮತ್ತು ಮಗುವಿನ ಅಪೌಷ್ಟಿಕತೆ ನಿವಾರಿಸಿ, ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಾರಿಗೆ ತರಲಾಗುತ್ತಿರುವ ಈ ಯೋಜನೆಯಡಿ, ನೊಂದಾಯಿತ ಎಲ್ಲಾ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತಿಂಗಳಿಗೆ 25 ದಿನದಂತೆ ವರ್ಷದಲ್ಲಿ 3೦೦ ದಿನ ನಿತ್ಯ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಉಚಿತ ಪೌಷ್ಟಿಕಾಂಶಯುಕ್ತ ಬಿಸಿಯೂಟ ವಿತರಿಸಲಾಗುತ್ತದೆ.
ಮಾತೃಪೂರ್ಣ ಯೋಜನೆಯಲ್ಲಿ ಏನೆಲ್ಲಾ ವಿತರಿಸಲಾಗುತ್ತದೆ…
ಈ ಯೋಜನೆಯಡಿ ನೀಡಲಾಗುವ ಬಿಸಿಯೂಟದಲ್ಲಿ ಅನ್ನ, ಸಾಂಬಾರ್, ಬೇಯಿಸಿದ ಮೊಟ್ಟೆ, ಪಲ್ಯ, 200 ಮಿಲಿ ಹಾಲು, ಶೇಂಗಾ ಚಿಕ್ಕಿ (ಮಿಠಾಯಿ) ಸೇರಿರುತ್ತದೆ. ಮೊಟ್ಟೆ ಸೇವಿಸದವರಿಗೆ ಮೊಳಕೆ ಕಾಳು ನೀಡಲಾಗುತ್ತದೆ. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ದಿನಕ್ಕೆ ಅಗತ್ಯವಿರುವ ಶೇ 4೦ ರಿಂದ 45 ರಷ್ಟು ಪ್ರೋಟೀನ್, ಕ್ಯಾಲರಿ ಮತ್ತು ಕ್ಯಾಲ್ಸಿಯಂ ಈ ಒಂದು ಹೊತ್ತಿನ ಊಟದಿಂದ ದೊರಕುತ್ತದೆ. ಜೊತೆಗೆ ಕಬ್ಬಿಣಾಂಶಯುಕ್ತ ಮಾತ್ರೆಯನ್ನು ನೀಡಲಾಗುತ್ತಿದ್ದು, ಊಟವಾದ ಬಳಿಕ ಕಡ್ಡಾಯವಾಗಿ ಸೇವಿಸುವಂತೆ ಸೂಚಿಸಲಾಗುತ್ತದೆ.
ಮೂರು ತಿಂಗಳು ತುಂಬಿದ ಗರ್ಭಿಣಿಯರಿಂದ ಮಗು ಜನಿಸಿದ ನಂತರ ಬಾಣಂತಿ ಅವಧಿಯ 6 ತಿಂಗಳವರೆಗೆ ಉಚಿತ ಪೌಷ್ಟಿಕ ಆಹಾರ ಒದಗಿಸಲಾಗುತ್ತದೆ. ಅಂದರೆ ಒಟ್ಟು 12 ತಿಂಗಳು ಉಚಿತ ಊಟ ನೀಡಲಾಗುತ್ತದೆ. ಹೆಸರು ನೊಂದಾಯಿಸಿ ಗರ್ಭಿಣಿಯರು 3ನೇ ತಿಂಗಳಿನಿಂದ 8ನೇ ತಿಂಗಳ ಅಂತ್ಯದವರೆಗೂ ಅಂಗನವಾಡಿ ಕೇಂದ್ರಕ್ಕೆ ಬಂದು ಆಹಾರ ಸೇವಿಸಬೇಕು. 9ನೇ ತಿಂಗಳಿನಿಂದ ಬಾಣಂತಿ ಅವಧಿಯ 45 ದಿನದವರೆಗೂ ಸಹಾಯಕಿಯರು ಮನೆ ಬಾಗಿಲಿಗೆ ಊಟದ ಡಬ್ಬಿ ತಲುಪಿಸುತ್ತಾರೆ. ಉಳಿದ 41/2 ತಿಂಗಳು ಬಾಣಂತಿಯರು ಕೇಂದ್ರಕ್ಕೆ ಬರಬೇಕಾಗುತ್ತದೆ.
ಗರ್ಭಿಣಿಯರ ನೊಂದಣಿಯಿಂದ ಅವರಿಗೆ ಪ್ರಸವಪೂರ್ವ ಆರೈಕೆ ಸೇವೆಗಳು ದೊರಕುತ್ತದೆ. ಇಲ್ಲಿ ಹೆರಿಗೆಯ ಅನುಭವ ಹೊಂದಿರುವವರು ಮತ್ತು ಅನುಭವಿಗಳು ಒಂದೆಡೆ ಸೇರುವುದರಿಂದ ಅನುಭವ ಹಂಚಿಕೆ ಸಾಧ್ಯವಾಗುತ್ತದೆ. ಈ ವೇಳೆ ಅವರಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಸ್ತನ್ಯ ಪಾನದ ಮಹತ್ವ, ಹೆರಿಗೆಯನ್ನು ಆಸ್ಪತ್ರೆಯಲ್ಲಿಯೇ ಮಾಡಿಸಿಕೊಳ್ಳುವುದು, ನಿಯಮಿತ ವೈದ್ಯಕೀಯ ತಪಾಸಣೆ, ವಿಶ್ರಾಂತಿ ಮುಂತಾದ ಅಗತ್ಯ ಮಾಹಿತಿ ನೀಡಲಾಗುತ್ತದೆ. ಪ್ರಸ್ತುತ ಗರ್ಭಿಣಿಯರು ಇರುವ ಮನೆಗೆ ಅಕ್ಕಿ, ಗೋಧಿ ಮುಂತಾದ ಧಾನ್ಯ ಪದಾರ್ಥಗಳನ್ನು ನೀಡುವ ಯೋಜನೆ ಜಾರಿಯಲ್ಲಿದೆ.