ಕನ್ನಡ ಚಿತ್ರಗಳಿಗೆ ಎಸಿ ಹಾಕೋಲ್ಲ. ಫಿಲ್ಮ್ ನೋಡೋರಿದ್ರೆ ನೋಡ್ಬಹುದು, ಇಲ್ಲ ಎದ್ದು ಹೋಗ್ಬಹುದು. ಇದು ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ಸಿಬ್ಬಂದಿಯ ಉದ್ಧಟತನದ ಮಾತುಗಳು.
ನಾಗವಾರ ಬಳಿ ಇರೋ `ಎಲಿಮೆಂಟ್ಸ್ ಮಾಲ್’ನ ಪಿವಿಆರ್‍ನಲ್ಲಿ ರಾಜಕುಮಾರ ಚಿತ್ರ ಪ್ರದರ್ಶನ ನಡೀತಿತ್ತು. ಚಿತ್ರ ಪ್ರಾರಂಭವಾಗಿ ಅರ್ಧ ತಾಸು ಕಳೆದ್ರೂ ಥಿಯೇಟರ್‍ನಲ್ಲಿ ಎಸಿ ಆನ್ ಆಗಿರಲಿಲ್ಲ. ಸೆಕೆಯಿಂದ ಬೇಸರಗೊಂಡ ಪ್ರೇಕ್ಷಕರು ಎಸಿ ಆನ್ ಮಾಡುವಂತೆ ಮಾಲ್ ಸಿಬ್ಬಂದಿಯನ್ನ ಕೇಳಿದ್ದಾರೆ. ಆದ್ರೆ ಎಸಿ ಆನ್ ಮಾಡುವ ಬದಲಿಗೆ ಮಾಲ್‍ನವವರು ಉದ್ಧಟತನದಿಂದ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಚಲನಚಿತ್ರಗಳಿಗೆಲ್ಲಾ ಎಸಿ ಹಾಕೋಕೆ ಆಗೋದಿಲ್ಲ. ಫಿಲ್ಮ್ ನೋಡೋರು ನೋಡ್ಬಹುದು. ಇಲ್ಲಾ ಎದ್ದು ಮನೆಗೆ ಹೋಗ್ಬಹುದು ಅಂತ ಧಿಮಾಕು ತೋರಿದ್ದಾರೆ.
ಇದ್ರಿಂದ ಕೋಪಗೊಂಡ ಪ್ರೇಕ್ಷಕರು ಮಾಲ್‍ನಲ್ಲಿ ಗಲಾಟೆ ಮಾಡಿದ್ದಾರೆ. ಅಲ್ಲದೆ, ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ಮಾಲ್‍ನವರು ಟಿಕೆಟ್ ದುಡ್ಡನ್ನ ವಾಪಸ್ ನೀಡಿದ್ದಾರೆ. ಎಸಿ ಯಲ್ಲಿ ಸಮಸ್ಯೆ ಇದೆ ಅಂತ ಕಾರಣ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಭಾರೀ ಸಕ್ಸಸ್‍ಫುಲ್ ಪ್ರದರ್ಶನ ಕಾಣ್ತಿರೋ ರಾಜಕುಮಾರ ಚಿತ್ರವನ್ನ ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಎಸಿ ಚೆನ್ನಾಗಿದ್ದರೂ ಹಾಕದ ಮಾಲ್‍ನವರಿಗೆ ಕನ್ನಡ ಚಿತ್ರ, ಕನ್ನಡಿಗರಿಗಿಂತ ಎಸಿಯೇ ಹೆಚ್ಚಾಗಿ ಹೋಯ್ತಾ ಅಂತ ಪ್ರೇಕ್ಷಕರು ಕಿಡಿಕಾರಿದ್ದಾರೆ.