ಯುವತಿಯೊಬ್ಬಳು ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ಹೋದ ವೀಡಿಯೋವೊಂದು ನಗರದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವತಿಯು ಸ್ಕೂಟಿಯ ಹಿಂಬದಿಯಲ್ಲಿ ಬೆತ್ತಲಾಗಿ ಕುಳಿತಿದ್ದಳು. ಮಾರ್ಗ ಮಧ್ಯೆ ಸ್ಕೂಟಿ ನಿಲ್ಲಿಸಿ ಮುಂದೆ ಕುಳಿತಿದ್ದ ಯುವಕನನ್ನು ಕೆಳಗಿಳಿಸಿ ತಾನೇ ಚಲಾಯಿಸಿಕೊಂಡು ಹೋಗಿದ್ದಾಳೆ. ಈ ದೃಶ್ಯವನ್ನು ಕಟ್ಟಡವೊಂದರ ಮೇಲಿಂದ ಮೊಬೈಲ‌್ನಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.
ಆದರೆ, ಈ ಘಟನೆ ಎಲ್ಲಿ ನಡೆದಿದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಇದು ಬೆಳಗಾವಿಯಲ್ಲಿಯೇ ನಡೆದಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಯುವತಿಯು ನಗರದ ಚನ್ನಮ್ಮ ವೃತ್ತದಿಂದ ಕ್ಲಬ್ ರೋಡ್‍ಕಡೆ ಬಂದು ಅಲ್ಲಿಂದ ಒಬ್ಬಳೇ ಸ್ಕೂಟಿ ಚಲಾಯಿಸಿಕೊಂಡು ಹಿಂಡಲಗಾ ಕಡೆ ತೆರಳಿದ್ದಾಳೆ ಎನ್ನಲಾಗಿದ್ದು, ವಿಡಿಯೋ ಗಮನಿಸಿದರೆ, ಡ್ರಗ್ಸ್ ಅಮಲಿನಲ್ಲಿ ಬೆಟ್ಟಿಂಗ್ ಕಟ್ಟಿ ಯುವತಿ ಮತ್ತು ಗೆಳೆಯರ ಗುಂಪೊಂದು ಈ ರೀತಿ ವರ್ತಿಸಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಯುವತಿ ನಗ್ನವಾಗಿ ಬೈಕ್ ರೈಡ್ ಮಾಡುತ್ತಿರುವ ವಿಡಿಯೋ ಕುರಿತಂತೆ ಪೋಲಿಸರು ತೀರ್ವವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ನಗರದ ವಿವಿಧ ಪ್ರದೇಶದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಈ ವಿಡಿಯೋ ಬೆಳಗಾವಿಯಲ್ಲಿ ನಡೆದಿದೆಯೋ ಅಥವಾ ಬೇರೆ ಪ್ರದೇಶದಲ್ಲಿ ನಡೆದ ವಿಡಿಯೋವನ್ನು ಬೆಳಗಾವಿಯಲ್ಲಿ ನಗರದಲ್ಲಿಯೇ ನಡೆದಿದೆ ಎಂದು ಬಿಂಬಿಸುವ ಕಾರ್ಯ ನಡೆಯುತ್ತಿದೆಯೋ ಎಂದು ಪೋಲಿಸರು ಪರೀಶೀಲನೆ ಮಾಡುತ್ತಿದ್ದಾರೆ.
ಕೆಲ ಸೆಕೆಂಡುಗಳ ಈ ವಿಡಿಯೊದಲ್ಲಿ ಮರಾಠಿ ಭಾಷೆಯ ಸಂಭಾಷಣೆ ಕೇಳುತ್ತಿದೆ. ಬೆಳಗಾವಿಯ ಯಾವ ದೃಶ್ಯವೂ ಅದರಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ. ವೀಡಿಯೋ ಮಾಡಿದವರೂ ಯಾರು ಎನ್ನುವುದು ಪತ್ತೆಯಾಗಿಲ್ಲ. ಅದು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದಲ್ಲಿ ನಡೆದ ಘಟನೆ ಎಂದೂ ಕೆಲವರು ಹೇಳುತ್ತಿದ್ದಾರೆ. ಹಾಗಾಗಿ ಸದ್ಯ ವೀಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣ ದಾಖಲಿಸಿಲ್ಲ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ ಕುಮಾರ ತಿಳಿಸಿದ್ದಾರೆ.