ಆರೋಗ್ಯ

ಯುವಜನರು ಕುಡಿತದ ಪ್ರಮಾಣ ಸಾಕು ಎಂದು ನಿರ್ಧರಿಸುತ್ತಾರೆ, ಹೇಗೆ ಗೊತ್ತಾ???

By admin

June 18, 2017

ಕುಡಿತದ ಮೇಲೆ ಹಿಡಿತ ಬರುವವರೆಗೂ ಯುವಜನರು ಎಗ್ಗಿಲ್ಲದೆ ಪೆಗ್ ಗಳನ್ನು ಏರಿಸುತ್ತಿರುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದ್ದು, ಕುಡಿತದ ಪ್ರಮಾಣ ನಿರ್ಧರಿಸುವ ಕಲೆ ಹೇಗೆ ಕರಗತವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿದೆ.

ಯುವಜನತೆ ಮದ್ಯಸೇವನೆ ಪ್ರಮಾಣವನ್ನು ನಿರ್ಧರಿಸುವುದು ಹೇಗೆ ಎಂಬುದನ್ನು ತಿಳಿದರೆ ಅಚ್ಚರಿ ಮೂಡುತ್ತದೆ. ಯಾಂತ್ರಿಕ ವ್ಯವಸ್ಥೆಯನ್ನು ವಿಶ್ಲೇಷಿಸುವ ಇಂಜಿನಿಯರಿಂಗ್ ಮಾದರಿ ಮದ್ಯಪಾನದ ಮಿತಿಯನ್ನು ಅಳೆಯುವುದಕ್ಕೂ ಅನ್ವಯಿಸುತ್ತದೆ ಎಂದು ಓಹಿಯೋ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

ಯುವಜನರು ಮದ್ಯಸೇವನೆ ಸಾಕು ಎಂದು ನಿರ್ಧರಿಸುವುದು ಇಂಜಿನಿಯರಿಂಗ್ ನಲ್ಲಿ ಹೇಳಲಾಗಿರುವ ಫೀಡ್ ಬ್ಯಾಕ್ ಕಂಟ್ರೋಲರ್ ನನ್ನೇ ಹೋಲುತ್ತದೆ ಎಂದು ಓಹಿಯೋ ವಿವಿಯ ಸಂಶೋಧಕ ಕೆವಿನ್ ಪಸ್ಸಿನೊ ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಕಾರ್ ಗಳಲ್ಲಿ ಬಳಕೆಯಾಗುವ ಕ್ರೂಸ್ ಕಂಟ್ರೋಲ್ ವ್ಯವಸ್ಥೆ ಯುವಜನರಲ್ಲೂ ಮದ್ಯ ಸೇವನೆ ಪ್ರಮಾಣವನ್ನು ‘ಸಾಕು’ ಎಂದು ನಿರ್ಧರಿಸುವ ವ್ಯವಸ್ಥೆಯನ್ನೇ ಹೋಲುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಯುವಜನತೆಯಲ್ಲಿ ಹೆಚ್ಚುತ್ತಿರುವ ಅತಿ ಹೆಚ್ಚು ಮದ್ಯ ಸೇವನೆಯ ಪ್ರವೃತ್ತಿಯನ್ನು ಇಂಜಿನಿಯರಿಂಗ್ ವಿಧಾನದ ಮೂಲಕ ಅರಿತುಕೊಳ್ಳದೆ ಇದ್ದರೆ ಅದು ಗೌಪ್ಯವಾಗಿಯೇ ಉಳಿಯುತ್ತದೆ ಎಂದು ಓಹಿಯೋ ವಿವಿಯ ಪ್ರೊಫೆಸರ್ ಜಾನ್ ಕ್ಲಾಪ್ಪ್ ಹೇಳಿದ್ದಾರೆ. ಸುಮಾರು 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಮೀಕ್ಷೆಗೊಳಪಡಿಸಲಾಗಿದ್ದು ಈ ಅಧ್ಯಯನ ವರದಿ ಪ್ರಕಟಿಸಲಾಗಿದೆ.