ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು. ಇಲ್ಲಿ ಓದಿರಿ :- ಗೋ ಹತ್ಯೆ ನಿಷೇಧ. ನಿಯಮದಲ್ಲಿ ಏನೇನಿದೆ ಗೊತ್ತ???
ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 20 ದಿನಗಳ ಸಂಭ್ರಮಾಚರಣೆ ದೇಶಾದ್ಯಂತ ನಡೆಯಲಿದೆ. ಜೂನ್ 15ರವರೆಗೆ ದೇಶದ ಪ್ರಮುಖ 900 ನಗರಗಳಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಮುಖಂಡರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಚೀನಾದ ಗಡಿಯ ಸಮೀಪದಲ್ಲಿರುವ ಈ ಸೇತುವೆ ದೇಶದ ಅತಿ ಉದ್ದನೆಯ ಸೇತುವೆಯಾಗಲಿದೆ. ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ಈ ಸೇತುವೆಯನ್ನು ಕಟ್ಟಲಾಗಿದ್ದು 9.15ಕಿ.ಮೀ. ಉದ್ದವಿದೆ. ಢೋಲಾ – ಸಡಿಯಾ ನಡುವೆ ಈ ಸೇತುವೆ ಸಂಪರ್ಕವನ್ನು ನಿರ್ಮಿಸುತ್ತದೆ. 950 ಕೋಟಿ ರೂ.ಗಳ ವೆಚ್ಚದಲ್ಲಿ ಈ ಬೃಹತ್ ಸೇತುವೆ ನಿರ್ಮಿಸಲಾಗಿದೆ. ಅಸ್ಸಾಂ ರಾಜಧಾನಿ ಡಿಸ್ಪುರದಿಂದ 540 ಕಿ.ಮೀ. ಹಾಗೂ ಅರುಣಾಚಲದ ರಾಜಧಾನಿ ಇಟಾನಗರದಿಂದ 300 ಕಿ.ಮೀ. ದೂರದಲ್ಲಿ ಈ ಸೇತುವೆ ಇದೆ. ವಾಯು ಮಾರ್ಗವಾಗಿ ಈ ಸೇತುವೆ ಚೀನಾಕ್ಕೆ 100 ಕಿ.ಮೀ. ದೂರದಲ್ಲಿದೆ. ಈ ಸೇತುವೆಯಿಂದ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ನಡುವಿನ ಪ್ರಯಾಣದ ಅಂತರ 4 ಗಂಟೆ ಕಡಿಮೆಯಾಗಲಿದೆ.