ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಹೆಣ್ಮಕ್ಕಳಿಗೆ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮಾದರಿಯಲ್ಲೇ ಕೇಂದ್ರ ಸರ್ಕಾರವೂ ಇದೀಗ ಮುಸ್ಲಿಂ ಮಹಿಳೆಯರಿಗೆ “ಶಾದಿ ಶಗುನ್’ ಹೆಸರಿನ ಯೋಜನೆ ಘೋಷಿಸಿದೆ.
ಹಾಗಾಗಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಾದಿ ಶಗುನ್ ಯೋಜನೆಯ ಬಗ್ಗೆ ಪರ-ವಿರೋಧದ ಚರ್ಚೆಗಳಾಗುತ್ತಿದೆ. ಶಾದಿ ಶಗುನ್ ಯೋಜನೆ ಯಾರಿಗೆ ಅನ್ವಯವಾಗುತ್ತದೆ? “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಅಂದಿದ್ದ ಮೋದಿ ಸರಕಾರ ಒಂದು ಸಮುದಾಯಕ್ಕೆ ಯೋಜನೆಯನ್ನು ಮೀಸಲಿಟ್ಟಿದ್ದು ಸರೀನಾ ಇತ್ಯಾಧಿ ವಿಚಾರಗಳ ಕುರಿತು ಚರ್ಚೆಯಾಗುತ್ತಿದೆ. ಹಾಗಾದ್ರೆ ಈ ಯೋಜನೆಯ ರೂಪ ರೇಷೆ ಮಾತು ಇದರ ಆಶಯದ ಮಾಹಿತಿಗಳನ್ನು ತಿಳಿಯೋಣ.
ಯಾರೂ ಅರ್ಹರು…
ಶಾದಿ ಶಗುನ್ ಯೋಜನೆ ಪ್ರಕಾರ, ಪದವೀಧರ ಮುಸ್ಲಿಂ ಮಹಿಳೆಯರು ಈ ಯೋಜನೆ ಫಲಾನುಭವಿಗಳಾಗಬಹುದು. ಯೋಜನೆ ಪ್ರಕಾರ, ವಿವಾಹದ ವೇಳೆ 51 ಸಾವಿರ ರೂ. ನೀಡಲಾಗುತ್ತದೆ.
ಶಾದಿ ಶಗುನ್ ಯೋಜನೆ ಕೇಂದ್ರ ಸರ್ಕಾರದಿಂದಲೇ ನೇರವಾಗಿ ಜನತೆಗೆ ನೀಡುವ ಯೋಜನೆಯಲ್ಲ. ಅದು ಮೌಲಾನ ಆಜಾದ್ ಎಜುಕೇಶನ್ ಫೌಂಡೇಶನ್ ಎಂಬ ಸರ್ಕಾರಿ ಅನುದಾನಿತ ಟ್ರಸ್ಟ್’ನಿಂದ ಕೊಡಲ್ಪಡುವ ಯೋಜನೆ. ಸ್ನಾತಕೋತ್ತರ ಪದವಿ ಪೂರೈಸಿದ ಮುಸ್ಲಿಂ ಮಹಿಳೆಯರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಅಂಥಹ ಯುವತಿಯರಿಗೆ ತಮ್ಮ ಮದುವೆಯ ಸಂದರ್ಭ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು Rs.51000/- ಯನ್ನು ನೀಡುತ್ತದೆ.
ಈ ಯೋಜನೆಗೆ ಆಯ್ಕೆಯಾಗುವ ಮಹಿಳೆಯರು ಮೊದಲು ಫೌಂಡೇಶನ್ ನೀಡುವ ವಿದ್ಯಾರ್ಥಿ ಸ್ಕಾಲರ್’ಶಿಪ್’ಗೆ ಆಯ್ಕೆಯಾಗಿರಬೇಕು. ವಿದ್ಯಾರ್ಥಿ ಸ್ಕಾಲರ್ಶಿಪ್’ಗೆ ಆಯ್ಕೆಯಾಗದ ಯುವತಿಯರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ.
ಈ ಯೋಜನೆಯ ಉದ್ದೇಶ…
ಈ ಯೋಜನೆಯ ಉದ್ದೇಶ ಮುಸ್ಲಿಂ ಮಹಿಳೆಯರನ್ನು ಉನ್ನತ ವ್ಯಾಸಂಗಕ್ಕೆ ಪ್ರೇರೇಪಿಸುವುದಾಗಿದೆ. ಮುಸ್ಲಿಂ ಮಹಿಳೆಯರು ಮತ್ತು ಅವರ ಪೋಷಕರು ಕಾಲೇಜು ಮೆಟ್ಟಿಲೇರಲು ಅಥವಾ ಉನ್ನತ ಶಿಕ್ಷಣಕ್ಕೆ ತಮ್ಮ ಸಂಪೂರ್ಣ ಸಂಪಾದನೆ ವ್ಯಯಿಸುತ್ತಾರೆ. ಅಂತಹವರಿಗೆ ಇದು ವರದಾನವಾಗಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಯೋಜನೆಯ ವಿವರಗಳನ್ನು ಮೌಲಾನಾ ಆಜಾದ್ ಎಜುಕೇಶನಲ್ ಫೌಂಡೇಶನ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಈ ಯೋಜನೆಯ ಹಿಂದಿನ ಉದ್ದೇಶ ಏನು ಎಂಬುವುದನ್ನು ತಿಳಿದುಕೊಂಡರೆ ಉತ್ತಮ. ಇನ್ನು ಉನ್ನತ ವ್ಯಾಸಂಗ ವಂಚಿತ ಯುವತಿಯರು ಎಲ್ಲಾ ಸಮುದಾಯದಲ್ಲೂ ಇರುತ್ತಾರೆ ಎನ್ನುವವರಿಗೆ ಆಯಾಯ ಸಮುದಾಯಕ್ಕೆ ಬೇಕಾದ ಅನೇಕ ನಿಗಮ-ಮಂಡಳಿಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಆ ನಿಗಮ ಮಂಡಳಿಗಳಲ್ಲಿ ವಿದ್ಯಾರ್ಥಿನಿಯರಿಗೆ ಉಪಯೋಗವಾಗುವ ವಿದ್ಯಾರ್ಥಿ ವೇತನಗಳು ಲಭ್ಯವಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳಬಹುದು.
ಹಾಗಾದ್ರೆ ಸಿಎಂ ಸಿದ್ದರಾಮಯ್ಯರವರ ಕರ್ನಾಟಕದ ಶಾದಿ ಭಾಗ್ಯ ಏನು ?
2013 ಅಕ್ಟೋಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ತಂದ ಯೋಜನೆ. ಇದು ಎಲ್ಲ ಅಲ್ಪಸಂಖ್ಯಾತ ಸಮುದಾಯದ ಹೆಣ್ಮಕ್ಕಳಿಗೆ ಅನ್ವಯ. ಅವರ ವಿವಾಹದ ವೇಳೆ 50 ಸಾವಿರ ರೂ. ಕೊಡುಗೆ ನೀಡಲಾಗುತ್ತದೆ.
ಕರ್ನಾಟಕ ವಕ್ಫ್ ಖಾತೆ ಮೂಲಕ ಹಣ ನೀಡಲಾಗುತ್ತದೆ. ಈ ಪ್ರಯೋಜನ ಪಡೆಯಲು ಮದುಮಗಳಿಗೆ 18 ವರ್ಷ, ಮದುಮಗನಿಗೆ 21 ವರ್ಷ ವಯಸ್ಸಾಗಿರಬೇಕು. ವಾರ್ಷಿಕ ಆದಾಯ 1.5 ಲಕ್ಷ ರೂ. ಒಳಗೆ ಇರಬೇಕು. ಒಂದೇ ಬಾರಿ ಈ ಯೋಜನೆ ಫಲಾನುಭವಿಯಾಗಬಹುದು.