ತಂತ್ರಜ್ಞಾನ

ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂದೇಶ ಕಳುಹಿಸಲು ಹೊಸ ಆ್ಯಪ್‌..!ತಿಳಿಯಲು ಈ ಲೇಖನ ಓದಿ…

By admin

January 01, 2018

ಮೊಬೈಲ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿ ಸಂಪರ್ಕ ಸಾಧಿಸಲು ಹೊಸ ಆ್ಯಪ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.ಈ ಆ್ಯಪ್‌ ಅನ್ನು ಯಾವುದೇ ಸ್ಮಾರ್ಟ್‌ಫೋನ್‌ಗೆ ಅಳವಡಿಸಬಹುದು. ನೆಟ್‌ವರ್ಕ್‌ ಇಲ್ಲದಿದ್ದರೂ ಈ ಆ್ಯಪ್‌ ಹಲವು ಕಿಲೋ ಮೀಟರ್‌ಗಳ ದೂರದವರೆಗೂ ವೈ–ಫೈ ಸಿಗ್ನಲ್‌ ಹೊರಸೂಸುತ್ತದೆ.

ಅಪಘಾತ, ನೈಸರ್ಗಿಕ ವಿಕೋಪ, ಅಗ್ನಿ ಅವಘಡ ಮುಂತಾದ ಅನಾಹುತಗಳು ಸಂಭವಿಸಿದಾಗ ತುರ್ತು ಸಂದೇಶ ಕಳುಹಿಸಲು ಈ ಆ್ಯಪ್‌ ಸಹಕಾರಿಯಾಗುತ್ತದೆ. ಸ್ಪೇನ್‌ನ ಯುನಿವರ್ಸಿಡಾಡ್‌ ಡೆ ಅಲಿಕೇಂಟ್‌ನ (ಯುಎ) ವಿಜ್ಞಾನಿಗಳು ಈ ಆ್ಯಪ್‌ ರೂಪಿಸಿದ್ದಾರೆ.

ಇದರಿಂದ ನೆಟ್‌ವರ್ಕ್‌ ಇಲ್ಲದೆ ತೊಂದರೆಯಲ್ಲಿ ಸಿಲುಕಿರುವ ವ್ಯಕ್ತಿಯ ಸ್ಥಳದ ನಿಖರ ಮಾಹಿತಿ ದೊರೆಯುತ್ತದೆ. ಜತೆಗೆ ‘ನಾನು ಗಾಯಗೊಂಡಿದ್ದೇನೆ’, ನನಗೆ ಸಹಾಯ ಬೇಕಿದೆ’ ಎನ್ನುವ ಸಂದರ್ಭಾನುಸಾರ ಸಂದೇಶ ಕಳುಹಿಸಬಹುದು. ಇದರಿಂದ ಅವರು ಸಹಾಯ ಪಡೆಯಲು ಅನುಕೂಲವಾಗುತ್ತದೆ’ ಎಂದು ಯುಎಯ ಅಧ್ಯಾಪಕ ಮತ್ತು ಆ್ಯಪ್‌ ರೂಪಿಸಿರುವ ಏಂಜೆಲ್‌ ಬರ್ನಾ ತಿಳಿಸಿದ್ದಾರೆ.

ಈ ಉಪಕರಣದಲ್ಲಿ ಚಿಕ್ಕ ಅಂಟೆನಾ ಇದ್ದು, ಅದು ಅಪಾಯದಲ್ಲಿರುವ ವ್ಯಕ್ತಿಯ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಇಷ್ಟೆಲ್ಲ ಆಗುವ ಮೊದಲು ತೊಂದರೆಯಲ್ಲಿರುವ ವ್ಯಕ್ತಿ ತನ್ನ ಮೊಬೈಲ್‌ನಲ್ಲಿರುವ ಈ ಆ್ಯಪ್‌ ಅನ್ನು ಚಾಲನೆಗೊಳಿಸಿರಬೇಕು’ ಎಂದು ಅವರು ವಿವರಿಸಿದ್ದಾರೆ.

ದುರಂತಗಳು ಸಂಭವಿಸಿದ ಸಂದರ್ಭಗಳಲ್ಲಿ ಸಂಕಷ್ಟದಲ್ಲಿ ಸಿಲುಕಿದ ವ್ಯಕ್ತಿ ಕಳುಹಿಸುವ ತುರ್ತು ಸಂಕೇತಗಳನ್ನು ಸ್ವೀಕರಿಸಲು ರಕ್ಷಣಾ ತಂಡದ ಬಳಿಯೂ ಉಪಕರಣ ಇರಬೇಕು. ಆ ಉಪಕರಣವನ್ನು ಸಹ ಈ ಸಂಶೋಧನಾ ತಂಡ ತಯಾರಿಸಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಇದರ ವ್ಯಾಪ್ತಿ 2–3 ಕಿಲೋ ಮೀಟರ್‌ ಇದ್ದು, ಇದನ್ನು ಇನ್ನಷ್ಟು ವಿಸ್ತರಿಸಬಹುದು. ಜತೆಗೆ ಕಡಿಮೆ ದರದಲ್ಲೂ ಇದು ಲಭ್ಯವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.