ಮೂತ್ರ ವಿಸರ್ಜನೆ ಮಾಡಲು ಚಾಲಕನೊಬ್ಬ ರೈಲನ್ನೇ ನಿಲ್ಲಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಾಲಕ ಲೋಕಲ್ ರೈಲನ್ನು ನಿಲ್ಲಿಸಿ ಎಂಜಿನ್ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ರೈಲು ಚಾಲಕ ಮುಂಬಯಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಉಲ್ಲಾಸನಗರದಿಂದ ವಿತಲ್‌ವಾಡಿಗೆ ಸಂಚರಿಸುವ ದಾರಿ ಮಧ್ಯೆ ನಿಲ್ಲಿಸಿ, ರೈಲಿನಿಂದ ಕೆಳಗಿಳಿದು ಮೂತ್ರ ವಿಸರ್ಜಿಸಿದ್ದಾನೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು ಶಿಂಧೆ ಎಂಬವರು ಕೆಲಸಕ್ಕಾಗಿ ತೆರಳುವಾಗ ರೈಲು ನಿಂತಿದ್ದನ್ನು ಗಮನಿಸಿದ್ದಾರೆ. ರೈಲಿನ ಚಾಲಕ ಕೆಳಗಿಳಿದು ಬಂದು ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಸೋನು ಶಿಂಧೇ ವಿಡಿಯೋ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ.
ಯಾವುದೇ ತಾಂತ್ರಿಕ ವೈಫಲ್ಯ ಅಥವಾ ಕೆಂಪು ಸಿಗ್ನಲ್ ನೋಡಿ ರೈಲನ್ನು ನಿಲ್ಲಿಸಲಿಲ್ಲ. ನಾನು ಕೆಲಸಕ್ಕೆ ಹೋಗುವಾಗ ರೈಲು ಎರಡು ನಿಲ್ದಾಣದ ನಡುವೆ ನಿಂತಿತ್ತು. ಆಗ ಚಾಲಕ ರೈಲಿನಿಂದ ಇಳಿದು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಹಾಗಾಗಿ ನಾನು ಅವರ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದೇನೆ ಎಂದು ಸೋನು ಶಿಂಧೇ ಹೇಳಿದ್ದಾರೆ.
ವೈರಲ್ ಫೋಟೋ ಹಾಗೂ ವಿಡಿಯೋಗಳು ಕೇಂದ್ರ ರೈಲ್ವೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.