ಸುದ್ದಿ

ಅನಾಥ ಯುವತಿಯರನ್ನು ಮದುವೆಯಾದ ಅಂಕೋಲದ ಯುವಕರು ವಿಜೃಂಭಣೆಯಿಂದ, ಶಾಸ್ತ್ರೋಕ್ತವಾಗಿ ಧಾರೆಯೆರೆದು ಕೊಟ್ಟ ಮಾತೃಛಾಯಾ ಟ್ರಸ್ಟ್…!

By admin

August 29, 2019

ಕನಸನ್ನು ಹೊತ್ತಿರುವ ಅನಾಥರ ಬಾಳಲ್ಲಿ ಬೆಳಗುವ ದೀಪದಂತೆ ಅವರ ಜೀವನ ಸಾಕಾರಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್​ನಿಂದ ಕಳೆದ 25 ವರ್ಷಗಳಿಂದ ಆರಂಭಿಸಿರುವ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಬೆಳೆದ ಇಬ್ಬರು ಹೆಣ್ಣು ಮಕ್ಕಳ ಬಾಳಿಗೆ ಇಂದು ಹೊಸ ಜೀವನ ನೀಡಲಾಯಿತು.

ಚಿಕ್ಕಂದಿನಿಂದಲೂ ಮನೆಯ ಮಕ್ಕಳಂತೆ ಮಾತೃಛಾಯಾ ಟ್ರಸ್ಟ್ ಆಶ್ರಮದಲ್ಲಿ ಬೆಳೆದ ಜಾಹ್ನವಿ ಹಾಗೂ ಸಂಜನಾ ಎಂಬ ಯುವತಿಯರು ಇವತ್ತು ಅಂಕೋಲಾ ಮೂಲದ ಹುಡುಗರನ್ನು ವರಿಸಿದರು. ಮನೆಯ ಮಕ್ಕಳಂತೆ ಪೋಷಣೆ ಮಾಡಿದ್ದ ಟ್ರಸ್ಟ್ ಇಂದು ಅತ್ಯಂತ ವಿಜೃಂಭಣೆಯಿಂದ ಈ ಯುವತಿಯರನ್ನು ಶಾಸ್ತ್ರೋಕ್ತವಾಗಿ ಧಾರೆಯೆರೆದು ಕೊಟ್ಟಿತ್ತು. ಗಣ್ಯಾತಿಗಣ್ಯರು ಈ ವಿಶೇಷ ವಿವಾಹಕ್ಕೆ ಸಾಕ್ಷಿಯಾದರು.

ಸುಮಾರು 36 ಮಂದಿ ಅನಾಥ ಮಕ್ಕಳು ಇರುವ ಈ ಆಶ್ರಮಕ್ಕೆ ಇಂದು ವಿವಾಹ ಮಹೋತ್ಸವದ ಸಂಭ್ರಮ ಕಳೆಗಟ್ಟಿತ್ತು. ನಿನ್ನೆಯಷ್ಟೇ ಸಂಪ್ರದಾಯವಾಗಿ ಅರಿಶಿಣ, ಬಳೆ ಹಾಗೂ ಗೌರಿ ಪೂಜೆ ಶಾಸ್ತ್ರ ಸೇರಿದಂತೆ ಅನೇಕ ಶಾಸ್ತ್ರಗಳು ನೆರವೇರಿದವು. ಇಂದು ಬೆಳಿಗ್ಗೆಯಿಂದ ನವವಧು-ವರರಿಗೆ ನೆರವೇರಿಸಬೇಕಾದ ಶಾಸ್ತ್ರೋಕ್ತ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ಮಹಿಳೆಯರೆಲ್ಲ ವಧುವಿಗೆ ತಾಯಿ ಸ್ಥಾನ ತುಂಬಿದರೆ, ಗಂಡಸರು ತಂದೆ ಸ್ಥಾನದಲ್ಲಿ ನಿಂತು ತಮ್ಮ ಸ್ವಂತ ಮಕ್ಕಳಿಗೆ ನೆರವೇರಿಸಬಹುದಾದ ಶಾಸ್ತ್ರಗಳನ್ನು ಸಂತಸದಿಂದ ನೆರವೇರಿಸಿದರು‌.

ಜತೆಗೆ ಇಲ್ಲಿನ ಮಕ್ಕಳಲ್ಲಿ ಪ್ರಮುಖವಾಗಿ ಸಂಸ್ಕಾರ ಬೀಜ ಬಿತ್ತಿರುವ ಸೇವಾ ಭಾರತಿ ಟ್ರಸ್ಟ್, ತಮ್ಮ ಮಕ್ಕಳ ಮದುವೆ ಮಾಡುವಾಗ ಯಾವ ಮಾನದಂಡ ಅನುಸರಿಸುತ್ತಾರೋ ಅದೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದು, ನವವಧುವರರಿಗೆ ಆಶೀರ್ವದಿಸಿ, ಶುಭಹಾರೈಸಿದರು.ಈ ವಿಶಿಷ್ಟ ಮದುವೆ ಕಾರ್ಯಕ್ರಮಕ್ಕೆ ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಹಾಗೂ ನೂತನ ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಅಕ್ಷತೆ ಹಾಕಿ ಆಶೀರ್ವದಿಸಿದರು