ಉಪಯುಕ್ತ ಮಾಹಿತಿ

ಮಳೆಗಾಲದಲ್ಲಿ ಬರುವ ರೋಗಗಳು, ಅವುಗಳ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಯಲು ಈ ಲೇಖನ ಓದಿ…

By admin

September 29, 2017

ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಹಲವು ರೋಗಾಣುಗಳ ಚಟುವಟಿಕೆ ಹೆಚ್ಚು. ಇದರೊಂದಿಗೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯೂ ಕಡಿಮೆಯಾಗಿ ರೋಗಗಳಿಗೆ, ವೈರಾಣು ಜ್ವರಗಳಿಗೆ ಕಾರಣವಾಗುತ್ತದೆ.

ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಕಾಡುವ ರೋಗಗಳು, ಅವುಗಳ ಮುನ್ನೆಚ್ಚರಿಕಾ ಕ್ರಮಗಳೇನು ಎಂಬ ಬಗ್ಗೆ ವಿವರಗಳು ಇಲ್ಲಿವೆ :-

ಮಲೇರಿಯಾ :-

ಮುಂಗಾರು ಸಂದರ್ಭದಲ್ಲಿ ಅತೀ ಸಾಮಾನ್ಯವಾಗಿ ಕಾಣಿಸುವ ಜ್ವರ, ಅಂದರೆ ಮಲೇರಿಯಾ ರೋಗ. ಹೆಣ್ಣು ಅನಾಫಿಲಿಸ್ ಸೊಳ್ಳೆ ಕಡಿತದಿಂದಾಗಿ ಈ ಜ್ವರ ಹಬ್ಬುತ್ತದೆ. ಹೆಚ್ಚಾಗಿ ನೀರು ನಿಂತಿರುವ ಸ್ಥಳಗಳು ಸೊಳ್ಳೆಗಳ ಆವಾಸ ಸ್ಥಾನವಾಗಿರುತ್ತದೆ.

ಪ್ಲಾಸ್ಮೋಡಿಯಂ ಜಾತಿಗೆ ಸೇರಿದ ಪ್ರೊಟೊಸೋವನ್ ಪರಾವಲಂಬಿಯ ಮೂಲಕ ಈ ರೋಗಕ್ಕೆ ಕಾರಣ. ಮಲೇರಿಯಾ ಜ್ವರ ಸಾಮಾನ್ಯ ಜ್ವರದಂತೆಯೇ ಕಾಣಿಸಿಕೊಳ್ಳಬಹುದು. ಆದರೆ ಬಳಿಕ ತೀವ್ರ ರೀತಿಯ ಜ್ವರ ಇರುತ್ತದೆ. ಮೈಕೈ ನೋವು, ತಲೆನೋವು, ತೀವ್ರ ಸುಸ್ತು ಇತ್ಯಾದಿ ಸಾಮಾನ್ಯ. ಇದಕ್ಕಾಗಿ ಸೂಕ್ತ ರಕ್ತ ಪರೀಕ್ಷೆಯೊಂದಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

ಮುನ್ನೆಚ್ಚರಿಕೆ ಏನು:-

ಮಲೇರಿಯಾ ರೋಗಾಣು ಕೇವಲ ಅನಾಫಿಲಿಸ್ ಹೆಣ್ಣು ಸೊಳ್ಳೆಗಳ ಮೂಲಕ ಮಾತ್ರ ಹರಡುತ್ತದೆ. ಆದ್ದರಿಂದ ಸೊಳ್ಳೆ ಕಡಿತವಾಗದಂತೆ ನೆಟ್ ಹಾಕುವುದು, ಮೈ ಪೂರ್ತಿ ಬಟ್ಟೆ ತೊಟ್ಟುಕೊಳ್ಳುವುದು ಮಾಡಬೇಕು, ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯವಿದ್ದೆಡೆ ಔಷದ ಸಿಂಪಡಣೆ ಮಾಡಬೇಕು. ಒಂದು ವೇಳೆ ಜ್ವರ ತೀವ್ರವಾದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ರೋಗಿಗೆ ಸಂಪೂರ್ಣ ವಿಶ್ರಾಂತಿಯೂ ಅಗತ್ಯ.

ಡೆಂಗ್ಯೂ:-

ಮಳೆಗಾಲದಲ್ಲಿ ಸಾಮಾನ್ಯ ಜ್ವರ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ನಮ್ಮ ದೇಹ ಬಹುಬೇಗ ಈ ವೈರಾಣು ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಈಡಿಸ್ ಈಜಿಪ್ಟಿ ಎಂಬ ಸೊಳ್ಳೆ ಕಚ್ಚುವುದರಿಂದ ಈ ಜ್ವರ ಹಬ್ಬುತ್ತದೆ.

ಈ ಸೊಳ್ಳೆ ಹಗಲಲ್ಲೇ ಕಚ್ಚುತ್ತದೆ. ಜನ ಸಂಚಾರ ಹಗಲು ಹೆಚ್ಚಾಗುವುದರಿಂದ ವೇಗವಾಗಿ ಜ್ವರ ಹಬ್ಬುವುದಕ್ಕೂ ಕಾರಣವಾಗುತ್ತದೆ. ತೀವ್ರ ಮೈ,ಕೈ ನೋವು, ಬೆನ್ನು ನೋವು, ವಾಂತಿ-ಭೇದಿ, ನಿಶ್ಯಕ್ತಿ ಇತ್ಯಾದಿ ಕಾಣಬಹುದು.

ಈ ಜ್ವರದ ಆರಂಭದಲ್ಲಿ ಶೀತ,ಕೆಮ್ಮು ಇರುವುದಿಲ್ಲ. ಕಣ್ಣು ಕೆಂಪಾದ ಲಕ್ಷಣ, ವಾಂತಿ ಇತ್ಯಾದಿ ಆದರೆ ಕೂಡಲೇ ವೈದ್ಯರನ್ನು ಕಾಣಬೇಕು. ಜ್ವರ ತಗುಲಿ ಹೆಚ್ಚಾದರೆ, ರಕ್ತದ ಕಣಗಳು ಕಡಿಮೆಯಾಗುತ್ತದೆ. ಬಿಳಿ ರಕ್ತಕಣ ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಇದರೊಂದಿಗೆ ಇತರ ಆರೋಗ್ಯ ಸಮಸ್ಯೆ ಇದ್ದರೆ ಸಾವಿಗೆ ಕಾರಣವಾಗುತ್ತದೆ.

ಮುನ್ನೆಚ್ಚರಿಕೆಯೇನು:-

ನಿಂತ ನೀರಲ್ಲಿ ಈ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಔಷದಿ, ಸೀಮೆ ಎಣ್ಣೆ ಸಿಂಪಡಣೆ, ಹೊಗೆ ಹಾಕಿ ಸೊಳ್ಳೆಗಳ ಉಪಟಳ ಕಡಿಮೆ ಮಾಡುವುದು, ಮೈಮುಚ್ಚಿಕೊಳ್ಳುವ ಬಟ್ಟೆ ತೊಡುವುದು, ನೀಲಗಿರಿ ಸಿಟ್ರೊಟೊರ ತೈಲವನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು.

ವಿಷಮಶೀತ ಜ್ವರ

ಸಾಮಾನ್ಯವಾಗಿ ಟೈಫಾಯಿಡ್ ಎಂಬ ಹೆಸರಿನಿಂದ ಕರೆಯುವ ಈ ಜ್ವರ ಸಾಲ್ಮೊನೆಲ್ಲಾ ಎಂಟಾರಿಕಾ ಟೈಪೈ ಎನ್ನುವ ಬ್ಯಾಕ್ಟೀರಿಯಾದಿಂದ ಬರುತ್ತದೆ. ವಿಶ್ವಾದ್ಯಾಂತ ಈ ರೋಗ ಸಾಮಾನ್ಯವಾಗಿ ಕಂಡು ಬರುತ್ತದೆ.

ಮಳೆಗಾಲದಲ್ಲಿ ಈ ರೋಗ ಅತೀ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚು. ಸೋಂಕಿರುವ ವ್ಯಕ್ತಿಯ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನ ಸೇವನೆಯಿಂದ ಈ ರೋಗ ಹಬ್ಬುತ್ತದೆ.

ರೋಗ ಬಾಧಿಸಿದ ವ್ಯಕ್ತಿಗೆ ಜ್ವರ, ಬೇಧಿ,ಗಂಟಲು ನೋವು, ಮೈಕೈ ನೋವು, ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಅಲ್ಲದೇ ಜ್ವರ ಶುರುವಾಗಿ ನಾಲ್ಕಾರು ದಿನಗಳಲ್ಲಿ ಮೈ ಮೇಲೆ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತದೆ. ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದಂತೆಯೇ ವೈದ್ಯರನ್ನು ಕಾಣಬೇಕು.

ಮುನ್ನೆಚ್ಚರಿಕೆ ಕ್ರಮವೇನು:-

ಆಹಾರವನ್ನು ತಯಾರಿಸಿ ಬಳಿಕ ಅದನ್ನು ಮುಚ್ಚಿಡಬೇಕು. ಕುದಿಸಿದ ನೀರನ್ನು ಕುಡಿಯುವುದು ಉತ್ತಮ. ಆಹಾರ ತಯಾರಿಸುವಾಗ ಶುಚಿತ್ವ ಕಾಯ್ದುಕೊಳ್ಳಬೇಕು.

ಚಿಕನ್‌ಗುನ್ಯಾ:-

ಈಡಿಸ್ ಅಲ್ಪೋಪಿಕ್ಟಸ್ ಸೊಳ್ಳೆಗಳಿಂದ ಈ ರೋಗದ ಚಿಕನ್‌ಗುನ್ಯಾ ವೈರಸ್ ಹಬ್ಬುತ್ತದೆ. ಇದು ಪ್ರಾಣಿಗಳಿಂದ ಬರುವ ಕಾಯಿಲೆಯಾಗಿದ್ದು, ತೀವ್ರ ತರವಾದ ಗಂಟುನೋವು, ಜ್ವರ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಹಗಲಲ್ಲೇ ಈ ಸೊಳ್ಳೆಗಳು ಕಚ್ಚುತ್ತವೆ. ಜ್ವರ ವಾಸಿಯಾದ ಮೇಲೂ ವಾರಗಳ ತನಕ ಗಂಟು ನೋವುಗಳು ಇರಬಹುದು.

ಮುನ್ನೆಚ್ಚರಿಕೆ ಏನು:-

ಮನೆ ಸುತ್ತ ಸೊಳ್ಳೆಗಳ ಆವಾಸ ಸ್ಥಾನ ಸೃಷ್ಟಿಯಾಗಲು ಬಿಡಲೇಬಾರದು. ಕೊಳಚೆ ಪ್ರದೇಶದಿಂದ ದೂರವಿರಬೇಕು. ಮೈತುಂಬ ಬಟ್ಟೆ, ನಿಲಗಿರಿ ಎಣ್ಣೆ ಮೈಗೆ ಹಚ್ಚುವುದರಿಂದ ಸೊಳ್ಳೆ ಕಡಿತ ತಪ್ಪಿಸಿಕೊಳ್ಳಬಹುದು.

ಕಾಲರಾ:-

ಮಳೆಗಾಲದ ಮಾರಣಾಂತಿಕ ಕಾಯಲೆಯಾಗಿದ್ದು. ಕಲುಷಿತ ನೀರು, ಆಹಾರ ಸೇವನೆಯಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ತೀವ್ರ ಭೇದಿ ಇದರ ಸಾಮಾನ್ಯ ಲಕ್ಷಣ. ತೀವ್ರ ಜ್ವರವೂ ಕಾಣಿಸಿಕೊಳ್ಳಬಹುದು.

ಸೂಕ್ತ ಶೌಚಾಲಯ ಇಲ್ಲದಿರುವ ಸ್ಥಳಗಳಲ್ಲಿ ಈ ರೋಗ ಬಹುಬೇಗನೆ ಹಬ್ಬುತ್ತದೆ. ರೋಗಿಯಲ್ಲಿ ಸಾಮಾನ್ಯ ಜ್ವರ ಕಾಣಿಸಿಕೊಂಡು ಬಳಿಕ ಇದು ಪ್ರಾಣಾಂತಿಕವೇ ಆಗಬಹುದು. ಆದ್ದರಿಂದ ವೈದ್ಯರ ಭೇಟಿ ಅಗತ್ಯ.

ಮುನ್ನೆಚ್ಚರಿಕೆಯೇನು:-

ಕಾಲರಾ ಕಂಡುಬಂದಲ್ಲಿ 6 ತಿಂಗಳು ವೈದ್ಯಕೀಯ ನೆರವು ಬೇಕು. ಆಹಾರ, ನೀರಿನ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ. ಬಯಲು ಶೌಚಾಲಯದಿಂದ ದೂರವಿರುವುದು ಒಳ್ಳೆಯದು.

ಕಾಮಾಲೆ:- ಅರಸಿನ ಕಾಮಾಲೆ, ಅರಸಿನ ಮುಂಡಿಗೆ,ಕಾಮಾಲೆ ರೋಗ ಎಂಬ ಹೆಸರು ಜಾಂಡಿಸ್‌ಗಿದೆ. ದೇಹದಲ್ಲಿ ಬೈಲ್‌ರೂಬಿನ್ ಎಂಬ ಕಿತ್ತಳೆ ಬಣ್ಣದ ವಿಸರ್ಜನೆಯಾಗಬೇಕಾದ ವಸ್ತು ಅಗತ್ಯಕ್ಕಿಂತ ಹೆಚ್ಚು ಶೇಖರವಾಗಿ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ. ಪಿತ್ತಕೋಶಕ್ಕೆ ವೈರಾಣು ಸೊಂಕು ತಗಲುವುದರಿಂದ ಕಾಮಾಲೆ ಕಾಣಿಸಿಕೊಳ್ಳುತ್ತದೆ.

ಇದಕ್ಕೆ ಕಲುಷಿತ ನೀರು, ಆಹಾರ ಕಾರಣ, ಕಾಮಾಲೆ ರೋಗದಿಂದ ತೀವ್ರ ಬಳಲಿಕೆ, ವಾಂತಿ, ಪಿತ್ತಕೋಶದ ಸಮಸ್ಯೆ ಕಾಣಿಸಬಹುದು. ಅಲ್ಲದೇ ಇದು ಇತರ ದೈಹಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ರೋಗ ಲಕ್ಷಣ ಕಾಣಿಸುತ್ತಿದಂತೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಅಗತ್ಯ. ಕಾಯಿಲೆ ನಿರ್ಲಕ್ಷಿಸಿ ತೀವ್ರವಾದರೆ ಪ್ರಾಣಕ್ಕೆ ಎರವಾಗಬಹುದು.

ಮುನ್ನೆಚ್ಚರಿಕೆ ಏನು:- ಕಲುಷಿತ ಆಹಾರ ಸೇವಿಸದೇ ಇರುವುದು, ಬಿಸಿ ನೀರನ್ನೇ ಸೇವಿಸುವುದು ಮಾಡಬೇಕು.

ಮೂಲ: