ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ.
ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ ಉದ್ದೇಶದಿಂದ, ಈರುಳ್ಳಿಯನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಅವುಗಳನ್ನು ಮೊಬೈಲ್ ವ್ಯಾನ್ ಮೂಲಕ ನಗರದಾದ್ಯಂತ ಗರಿಷ್ಠ ಪ್ರದೇಶಗಳಿಗೆ ತಲುಪಿಸಲು ಪ್ರಯತ್ನಿಸುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಸೇಬು ಬೆಲೆಗಿಂತ ಈರುಳ್ಳಿ ಬೆಲೆ ದುಬಾರಿಯಾಗಿರುವುದು ಕಂಡು ಬಂದಿದೆ. ಸಗಟು ಖರೀದಿಯಲ್ಲಿ ಪ್ರತಿ ಕೆಜಿ ಸೇಬಿಗೆ 30-40 ರೂಪಾಯಿವರೆಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.