ಮಧ್ಯ ಪ್ರದೇಶದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವುದು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ.
ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಕ್ಕಳು ಚರಂಡಿ ನೀರಿನಲ್ಲಿ ತಮ್ಮ ತಟ್ಟೆಗಳನ್ನು ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ತಲೆ ತಗ್ಗಿಸುವಂತಹ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಮಾಕ್ರೋನಿಯಾ ಪ್ರದೇಶದಲ್ಲಿ ನಡೆದಿದೆ. ಮಕ್ಕಳಿಗೆ ಬಿಸಿಯೂಟವನ್ನು ಪೂರೈಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳೇ ಪಾತ್ರೆಗಳನ್ನು ತೊಳೆಯುವುದು ಸೇರಿದಂತೆ ಎಲ್ಲಾ ನೈರ್ಮಲ್ಯ ಕ್ರಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆದರೆ, ಈ ವಿಚಾರದಲ್ಲಿ ಶಾಲೆ ನಿಯಮವನ್ನು ಉಲ್ಲಂಘಿಸಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಚ್.ಪಿ. ಕುರ್ಮಿ, ಈ ಘಟನೆ ಬಗ್ಗೆ ಸಂಬಂಧಿತ ಶಾಲೆಯ ಮುಖ್ಯೋಪಾಧ್ಯಾಯರಿಂದ ವಿವರಣೆ ನೀಡುವಂತೆ ಆದೇಶ ಮಾಡಿದ್ದೇವೆ ಎಂದಿದ್ದಾರೆ.