ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹೋರಿಯೊಂದು ಮಹಿಳೆಯ ಮಂಗಳಸೂತ್ರವನ್ನು ನುಂಗಿರುವ ಘಟನೆ ನಡೆದಿದ್ದು, ಸಗಣಿಯ ಮೂಲಕ ಹೊರಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ವಾಘಪುರ್‌ನಲ್ಲಿ ನಡೆದಿದ್ದು, ಹೋರಿಗಳ ಹಬ್ಬದ ವೇಳೆ ಈ ರೀತಿ ಸರವನ್ನು ಹೋರಿ ನುಂಗಿತ್ತು ಎನ್ನಲಾಗಿದೆ.
ಆ.30ರಂದು ನಡೆದ ಹಬ್ಬದ ವೇಳೆ ರಾಸುಗಳಿಗೆ ಅಲಂಕಾರ ಮಾಡಲಾಗುತ್ತದೆ. ಈ ವೇಳೆ ಮಹಿಳೆಯ ಮನೆಯಲ್ಲಿದ್ದ ರಾಸುಗಳಿಗೂ ಅಲಂಕಾರ ಮಾಡಲಾಗಿತ್ತು. ಪೂಜೆ ಮಾಡುವ ವೇಳೆ ಕೊರಳಲ್ಲಿದ್ದ 1.5ಲಕ್ಷ ಮೌಲ್ಯದ ಮಂಗಳಸೂತ್ರ ಹೋರಿಯ ಕೊಂಬಿಗೆ ಸಿಕ್ಕಿಹಾಕಿಕೊಂಡು ಹರಿದಿದ್ದರಿಂದ ಸರವನ್ನು ತಟ್ಟೆಯಲ್ಲಿ ಇಟ್ಟಿದ್ದಾರೆ.
ಇದೇ ತಟ್ಟೆಯಲ್ಲಿದ್ದ ಸಿಹಿ ಚಪಾತಿಯನ್ನು ಹೋರಿ ತಿಂದಿದೆ. ಬಳಿಕ ತಟ್ಟೆ ಖಾಲಿಯಾಗಿರುವುದು ಗಮನಿಸಿದಾಗ ಸರ ಕಾಣೆಯಾಗಿರುವುದು ಗೊತ್ತಾಗಿದೆ.
ಸಗಣಿಯಲ್ಲಿ ಈ ಸರ ಬರುತ್ತದೆ ಎಂದು ಹಲವು ದಿನ ಕಾದು ಬಳಿಕ ಪಶುವೈದ್ಯರ ಬಳಿ ದಂಪತಿ ಹೋಗಿದ್ದಾರೆ. ಈ ವೇಳೆ ಸಗಣಿಯಲ್ಲಿ ಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ಸರವನ್ನು ಹೊರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.