ದಿನಕ್ಕೊಂದು ನೀತಿ ಕಥೆ

ಭೂಮಿ ತಲೆಕೆಳಗಾದರೆ …? ಓದಿ ದಿನಕ್ಕೊಂದು ನೀತಿ ಕಥೆ….

By admin

July 07, 2017

ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತಿದ್ದಾಗ ಬೋದಿಸತ್ವ ಒಂದು ಸಿಂಹದ ಹೊಟ್ಟೆಯಲ್ಲಿ ಹುಟ್ಟಿ ಕಾಡಿನಲ್ಲಿದ್ದ. ಆ ಕಾಡಿನ ಅಂಚಿನ ಸಮುದ್ರತೀರದಲ್ಲಿ ಒಂದು ಬೇಲದ ಮತ್ತು ತಾಳೆಯ ಮರಗಳ ತೋಪಿತ್ತು. ಒಂದು ತಾಳೆಯ ಮರ ಮತ್ತು ಬೇಲದಮರದ ಅಕ್ಕಪಕ್ಕದಲ್ಲಿ ಕಡೆ ಮೊಲವೊಂದು ವಾಸಮಾಡುತ್ತಿತ್ತು.

ಒಂದು ದಿನ ಆ ಮೊಲ ತಾಳೆಯ ಮರದ ನೆರಳಿನಲ್ಲಿ ಮಲಗಿತ್ತು. ಒಂದು ಕ್ಷಣ ಅದಕ್ಕೆ ಅಕಸ್ಮಾತ್ ಈ ಭೂಮಿಯೇ ತಲೆಕೆಳಗಾದರೇನುಗತಿ? ಎಂಬ ಯೋಚನೆ ಬಂತು. ಅದೇ ಸಮಯದಲ್ಲಿ ಒಂದು ಬೇಲದ ಹಣ್ಣು ತೊಟ್ಟು ಕಳಚಿ ತಾಳೆಯ ಗರಿಯ ಮೇಲೆ ಬಿದ್ದು ಶಬ್ದವಾಯಿತು. ಅದನ್ನು ಕೇಳಿ ಮೊಲ ಭೂಮಿ ತಲೆಕೆಳಗಾಗುತ್ತಿದೆ ಎಂದೇ ಬಾವಿಸಿ ಬೀತಿಯಿಂದ ಓಡತೊಡಗಿತು.

ವಿಪರೀತ ಭಯದಿಂದ ಓಡುತ್ತಿರುವ ಅದನ್ನು ದಾರಿಯಲ್ಲಿ ಇನ್ನೊಂದು ಮೊಲ ಕಂಡು, ‘’ಏಕೆ ಹೀಗೆ ಓಡುತ್ತಿರುವೆ? ಏನಾಯಿತು?’’ ಎಂದು ಕೇಳಿತು.

‘’ಅಯ್ಯೋ, ಅದನ್ನು ಏನೆಂದು ಹೇಳಲಿ? ಭೂಮಿ ತಲೆಕೆಳಗಾಗುತ್ತಿದೆ‘’ ಎಂದು ಅದು ಓಡುತ್ತಲೇ ಇತ್ತು. ಆ ಇನ್ನೊಂದು ಮೊಲವು ಭಯಬೀತಿಯಿಂದ ಅದರ ಹಿಂದೆ ಓಡತೊಡಗಿತು. ಅವೆರಡನ್ನೂ ನೋಡಿ ಇನ್ನೊಂದು ಮತ್ತೊಂದು, ಹೀಗೆ ಸಾವಿರ ಮೊಲಗಳ ಹಿಂಡೇ ಓಡತೊಡಗಿತು.

ಅಷ್ಟೇ ಅಲ್ಲದೆ ಅಷ್ಟು ಮೊಲಗಳ ಗಾಬರಿಯಿಂದ ಹಾಗೆ ಓಡುತ್ತಿರುವುದನ್ನು ಕಂಡು ಭೂಮಿ ತಲೆಕೆಳಗಾಗುವ ಆಪತ್ತು ಬಂದಿದೆಯೆಂದು ತಿಳಿದು ಭಯದಿಂದ ಒಂದು ಹಂದಿ, ಹಸು, ಎಮ್ಮೆ ಮತ್ತು ಹುಲಿ, ಸಿಂಹ, ಆನೆ ಇತ್ಯಾದಿ ಪ್ರಾಣಿಗಳೂ ಓಡತೊಡಗಿದವು ಹಲವು ಪ್ರಾಣಿಗಳ ಸಾಲುಗಳ ಸೇರಿ ಒಂದು ಯೋಜನದಷ್ಟು ಉದ್ದವಾಯಿತು.

ದಾರಿಯಲ್ಲಿ ಸಿಂಹವಾಗಿದ್ದ ಬೋದಿಸುತ್ತ ಈ ಮೆರವಣಿಗೆಯನ್ನು ಕಂಡು ‘’ಎಲ್ಲ ಏಕೆ ಹೀಗೆ ಓಡುತ್ತಿರುವಿರಿ?’’ ಎಂದು ಕೇಳಿದ. ಅವೆಲ್ಲ ‘ಭೂಮಿ ತಲೆಕೆಳಗಾಗುವುದು ಎಂದಾದರೂ ಸಾದ್ಯವೇ? ಇವು ಬೇರೆ ಏನನ್ನೋ ಕಂಡು ತಪ್ಪು ತಿಳಿದು ಹೀಗೆ ಓಡುತ್ತಿರಬೇಕು. ಹೀಗೆ ಬಿಟ್ಟರೆ ಎಲ್ಲ ಪ್ರಾಣಿಗಳು ಅನ್ಯಾಯವಾಗಿ ನಾಶವಾಗಿಬಿಡುತ್ತವೆ. ಅದನ್ನು ತಪ್ಪಿಸಬೇಕು’ ಎಂದು ಬೋದಿಸತ್ವ ಯೋಚಿಸಿದ.

ಕೂಡಲೇ ಸಿಂಹ ವೇಗವಾಗಿ ಓಡಿ ಬಂದು ಎಲ್ಲ ಪ್ರಾಣಿಗಳು ಅಡ್ಡವಾಗಿ ನಿಂತು ಮೂರೂ ಸಲ ಸಿಂಹನಾದ ಮಾಡಿತು. ಹೆದರಿದ ಪ್ರಾಣಿಗಳೆಲ್ಲ ನಿಂತವು. ‘’ಏಕೆ ಓಡುತ್ತಿರುವೆ?’’ಎಂದು ಅವನು ಕೇಳಿದ.

‘’ಭೂಮಿ ತಲೆಕೆಳಗಾಗುತ್ತಿದೆ.’’

‘’ಅದನ್ನು ನೋಡಿದವರಾರು?’’

‘’ಆನೆ’’

ಆನೆ ತನಗೆ ಗೊತ್ತಿಲ್ಲ, ಸಿಂಹಕ್ಕೆ ಗೊತ್ತು ಎಂದು ಹೇಳಿತು. ಸಿಂಹ ಹುಲಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು. ಹುಲಿ ಇನ್ನೊಂದು ಪ್ರಾಣಿಯನ್ನು ತೋರಿಸಿತು.  ಕಡೆಗೆ ಮೊಲಗಳ ಸರದಿ ಬಂತು. ಮೊಲಗಳು ತಮ್ಮ ಮುಂದೆ ಓಡಾಡುತಿದ್ದ ಮೊಲವನ್ನು ತೋರಿಸಿದೆವು.

‘’ಭೂಮಿ ತಲೆಕೆಳಗಾಗಿರುವದನ್ನು ನೋಡಿದೆಯಾ?’’ ಎಂದು ಸಿಂಹ ಮೊಲವನ್ನು ಕೇಳಿತು.

‘’ಹೌದು, ನಾನು ನೋಡಿದೆ’’ ಎಂದಿತು ಮೊಲ.

‘’ಎಲ್ಲಿ?’’

‘’ಸಮುದ್ರದಲ್ಲಿ ಹತ್ತಿರ ಬೇಲ ಮತ್ತು ತಾಳೆಯ ಮರಗಳ ತೋಪಿನಲ್ಲಿ. ಅಲ್ಲಿ ನಾನು ಬೇಲದ ಮರದ ಬುಡದಲ್ಲಿ ಮಲಗಿದ್ದೆ. ಒಂದು ವೇಳೆ ಭೂಮಿ ತಲೆಕೆಳಗಾದರೆ ಎಲ್ಲಿ ಹೋಗಲಿ? ಎಂದು ನಾನು ಯೋಚಿಸಿದ್ದೆ. ಆಗ ಭೂಮಿ ತಲೆಕೆಳಗಾಗುವ ಸದ್ದು ಕೇಳಿ ಬಂತು. ನಾನು ಓಡಿ ಬಂದೆ.’’

ನಿಜ ಸಂಗತಿಯನ್ನು ತಿಳಿಯಬೇಕೆಂದು ಸಿಂಹ ಇತರ ಪ್ರಾಣಿಗಳನ್ನು ಕುರಿತು ‘’ಈ ಮೊಲ ಹೇಳಿದ ಮಾತು ನಿಜವೇ ಎಂಬುದನ್ನು ನಾನು ತಿಳಿದು ಬರುವವರೆಗೆ ನೀವೆಲ್ಲ ಇಲ್ಲಿಯೇ ಇರಿ‘’ ಎಂದು ಹೇಳಿ ಮೊಲವನ್ನು ಕರೆದು ತನ್ನ ಬೆನ್ನ ಮೇಲೆ ಕೂಡಿಸಿಕೊಂಡು ಹೊರಟಿತು.

ಅವೆರೆಡೂ ಬಹುಬೇಗ ಆ ತೋಪಿನ ಬಳಿಗೆ ಬಂದವು. ಮೊಲವನ್ನು ಇಳಿಸಿ ‘’ಆ ಸ್ಥಳವನ್ನು ತೋರಿಸಿ’’ ಎಂದು ಸಿಂಹ ಹೇಳಿತು. ಅದು ಹೆದುರುತ್ತಲೇ ಹೋಗಿ, ‘’ಇದೇ ಶಬ್ದವಾದ ಸ್ಥಳ’’  ಎಂದು ತೋರಿಸಿತು.

ಸಿಂಹ ಆ ಸ್ಥಳಕ್ಕೆ ಹೋಗಿ ಪರಿಶೀಲಿಸಿತು. ಅಲ್ಲೇ ತಾಳೆಗರಿಯ ಮೇಲೆ ಬಿದ್ದಿದ್ದ ಬೇಲದ ಹಣ್ಣನ್ನು ನೋಡಿ, ಇದು ಭೂಮಿ ತಲೆಕೆಳಗಾಗುತ್ತಿರುವ ಶಬ್ದವಲ್ಲ. ಬೇಲದ ಹಣ್ಣು ತಾಳೆಯ ಗರಿಯ ಮೇಲೆ ಬಿದ್ದ ಶಬ್ದವನ್ನು ಕೇಳಿ ತಪ್ಪು ತಿಳಿದುಕೊಂಡಿದೆಯೆಂದು ಅರ್ಥಮಾಡಿಕೊಂಡಿತು.

ಅನಂತರ ಮತ್ತೆ ಮೊಲವನ್ನು ಬೆನ್ನ ಮೇಲೆ ಕೂಡಿಸಿಕೊಂಡು ಸಿಂಹ ಆ ಪ್ರಾಣಿಗಳಿದ್ದ ಸ್ಥಳಕ್ಕೆ ಬಂದು, ನಿಜ ಸಂಗತಿಯನ್ನ್ಜು ತಿಳಿಸಿ ಪ್ರಾಣಿಗಳಿಗೆ ಧೈರ್ಯ ಹೇಳಿತು. ತಮ್ಮ ಪ್ರಾಣವುಳಿಸಿದ ಸಿಂಹವನ್ನು ಎಲ್ಲ ಪ್ರಾಣಿಗಳೂ ಕೊಂಡಾಡಿದವು.