ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳು ಸೆಮಿ ಫೈನಲ್ ಪ್ರವೇಶಿಸಿವೆ.
ಇದರ ಬೆನ್ನಲ್ಲೇ ಬಾಂಗ್ಲಾದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.
ವಿವಾದಿತ ಚಿತ್ರ :-
ಈ ಚಿತ್ರದಲ್ಲಿ ಹುಲಿಗೆ ಬಾಂಗ್ಲಾದೇಶದ ಭಾವುಟ ಹೊದಿಸಿ, ನಾಯಿಯೊಂದಕ್ಕೆ ಭಾರತದ ತ್ರಿವರ್ಣ ಧ್ವಜವನ್ನು ಹೊಂದಿಸಲಾಗಿದೆ. ಅಂತೆಯೇ ನಾಯಿಯನ್ನು ಹುಲಿ ಅಟ್ಟಾಡಿಸುತ್ತಿರುವಂತೆ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಟ್ಟಿದ್ದಾರೆ. ಇದೀಗ ಈ ವಿವಾದಿತ ಚಿತ್ರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬಾಂಗ್ಲಾದೇಶದ ಕಿಡಿಗೇಡಿ ಅಭಿಮಾನಿಗಳು ಕೀಟಲೆ ಇದೆ ಮೊದಲಲ್ಲ, ಈ ಹಿಂದೆಯೂ ಸಹ ಧೋನಿ ರುಂಡವನ್ನು ಬಾಂಗ್ಲಾದೇಶ ಬೌಲರ್ ಒಬ್ಬ ಹಿಡಿದಿರುವ ರೀತಿ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು.
ಅಲ್ಲಿಗೂ ಸುಮ್ಮನಿರದ ಬಾಂಗ್ಲಾದೇಶದ ಸ್ಥಳೀಯ ಪತ್ರಿಕೆಯೊಂದು ಭಾರತೀಯ ಕ್ರಿಕೆಟ್ ಆಟಗಾರರ ಅರ್ಧ ತಲೆ ಬೋಳಿಸಿ ಚಿತ್ರ ಪ್ರಕಟಿಸಿತ್ತು, ಬಾಂಗ್ಲಾ ಕ್ರಿಕೆಟಿಗನೋರ್ವ ಭಾರತೀಯ ಕ್ರಿಕೆಟಿಗರ ತಲೆ ಬೋಳಿಸಿದ ರೀತಿಯಲ್ಲಿ ಚಿತ್ರ ಪ್ರಕಟಿಸಿ ವಿವಾದಕ್ಕೀಡಾಗಿತ್ತು. ವ್ಯಾಪಕ ವಿರೋಧದ ಬಳಿಕ ಆ ಚಿತ್ರವನ್ನು ಪತ್ರಿಕೆ ತೆಗೆದು ಹಾಕಿತ್ತು.
ಇದೀಗ ಮತ್ತೊಮ್ಮೆ ಕಿಡಿಗೇಡಿ ಬಾಂಗ್ಲಾದೇಶ ಅಭಿಮಾನಿಗಳು ಮತ್ತೆ ಭಾರತದ ಗೌರವಕ್ಕೆ ಧಕ್ಕೆ ತರುವಂತಹ ಚಿತ್ರ ಬಿಡಿಸಿ ಭಾರತೀಯರನ್ನು ಕೆಣಕಿದ್ದಾರೆ.