ಮನುಷ್ಯತ್ವ ಮರೆತು ಮಂಗವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಬಡಿಗೆಯಿಂದ ಹೊಡೆದು ಅಮಾನುಷವಾಗಿ ಹಲ್ಲೆ ಮಾಡಿ ಕೊಂದಿದ್ದ ಆರೋಪಿ ಪವನ್ ಬಂಗಾರ್ ಗೆ ಕೋರ್ಟ್ ಎರಡು ಬಾರಿ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಾಣಿ ಹಿಂಸೆ ಪ್ರಕರಣದಲ್ಲಿ ಎರಡು ಬಾರಿ ಜಾಮೀನು ನಿರಾಕರಣೆಯಾಗಿರುವುದು ಭಾರತದಲ್ಲಿ ಇದೇ ಮೊದಲು ಎಂದು ವರದಿಯಾಗಿದೆ.
ಪ್ರಾಣಿಗಳ ಮೇಲೆ ಕ್ರೌರ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿರುವುದು ಕೂಡ ಭಾರತದಲ್ಲಿ ಇದೇ ಮೊದಲು ಎಂದು ಪೇಟಾದ ಎಮರ್ಜೆನ್ಸಿ ರೆಸ್ಪಾನ್ಸ್ ಕೋ-ಆರ್ಡಿನೇಟರ್ ಮೀಟ್ ಆಶರ್ ಹೇಳಿದ್ದಾರೆ.
ಕೊಲೆ ಪ್ರಕರಣಗಳಲ್ಲಿಯೂ ಕೂಡ ಸಾಮಾನ್ಯವಾಗಿ ಆರೋಪಿಗಳಿಗೆ 2-3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗುತ್ತದೆ. ಆದರೆ ಈ ಕೇಸಿನಲ್ಲಿ 5 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದು ನಮಗೆ ಆಶ್ಚರ್ಯವಾಗಿದ್ದು, ವಕೀಲರಿಗೂ ಅಚ್ಚರಿಯಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಪ್ರಾಣಿ ಹಿಂಸೆ ಪ್ರಕರಣದಲ್ಲಿ ಆರೋಪಿ ಮೊದಲ ವಿಚಾರಣೆಯಲ್ಲಿ ಜಾಮೀನು ಪಡೆದು ಹೊರಬರುತ್ತಾರೆ. ಆದ್ರೆ ಈ ಪ್ರಕರಣ ಕೆಲವು ಅಂಶಗಳಿಂದ ಭಿನ್ನವಾಗಿದೆ. ಈ ಪ್ರಕರಣದಲ್ಲಿ ಪ್ರಾಣಿ ಯಾವುದೇ ಪ್ರಚೋದನೆ ಮಾಡದಿದ್ದರೂ ಅದನ್ನ ಹೊಡೆದು ಕೊಲ್ಲಲಾಗಿದೆ. ನಂತರವೂ ಅದಕ್ಕೆ ಹಿಂಸಿಸಲಾಗಿದೆ.
ಅಮಾನುಷವಾಗಿ ಮರಕ್ಕೆ ಕಟ್ಟಿ ಕೋತಿಯನ್ನು ಹೊಡೆದು ಕೊಂದ 23 ವರ್ಷದ ಯುವಕ ಸೇರಿದಂತೆ ಇಬ್ಬರು ಅಪ್ರಾಪ್ತರನ್ನು ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಲೀಸರು ಬಂಧಿಸಿದ್ದರು.ತೋಟಕ್ಕೆ ಬಂದಿದ್ದ ಕೋತಿಯನ್ನ ಮರಕ್ಕೆ ಹಗ್ಗದಿಂದ ಉಲ್ಟಾ ನೇತು ಹಾಕಿ ಮನಬಂದಂತೆ ಹೊಡೆದಿರೋದನ್ನ ವಿಡಿಯೋ ಮಾಡಿದ್ದರು.
ನಂತರ ಕೋತಿಯನ್ನ ಕೆಳಗಿಳಿಸಿ ಕೋಲಿನಿಂದ ಹೊಡೆದಿದ್ದು, ಏಟನ್ನ ಸಹಿಸಲಾಗದೇ ವಿಲವಿಲ ಒದ್ದಾಡಿ ಕೋತಿ ಪ್ರಾಣ ಬಿಟ್ಟಿತ್ತು. ಬಳಿಕ ವಿಡಿಯೋ ಮೂಲಕ ಅರಣ್ಯ ಅಧಿಕಾರಿಗಳು ಆರೋಪಿಗಳನ್ನ ಪತ್ತೆಹಚ್ಚಿ ಬಂಧಿಸಿದ್ದರು.
ಅರಣ್ಯ ಅಧಿಕಾರಿಗಳು ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9ರಡಿ ದೂರು ದಾಖಲಿಸಿಕೊಂಡಿದ್ದರು. ಆರೋಪಿಯನ್ನ ಸ್ಥಳಿಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಆರೋಪಿಯ ದುಷ್ಕೃತ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದ್ದರಿಂದ ಈ ಪ್ರಕರಣ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ.
ಆರೋಪಿಯ ಮೊದಲ ಜಾಮೀನು ನಿರಾಕರಿಸಿದ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯ್ತು. ಮತ್ತೆ ನ್ಯಾಯಾಧೀಶರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಎರಡನೇ ಬಾರಿಯೂ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.