ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ಪಸರಿಸಿರುವ ಬೆನ್ನಲ್ಲೇ ಪಾಕಿಸ್ತಾನ ಭಾರತೀಯ ಪೈಲಟ್ ರನ್ನು ಬಂಧಿಸಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯ ಜೆಟ್ ವಿಮಾನ ಪತನಗೊಂಡಿದ್ದು ಇದರಲ್ಲಿದ್ದ ಪೈಲಟ್ ಗಳ ಪೈಕಿ ಒಬ್ಬರನ್ನು ಬಂಧಿಸಿದ್ದೇವೆ. ಇನ್ನೊಬ್ಬ ಪೈಲಟ್ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ಪಾಕಿಸ್ತಾನ ಹೇಳಿದೆ.
ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನಾನು ವಿಂಗ್ ಕಮಾಂಡರ್ ಅಭಿನಂದನ್, ನಾನು ಐಎಎಫ್ ಅಧಿಕಾರಿ, ನನ್ನ ಸರ್ವಿಸ್ ನಂಬರ್ 27981. ಹೀಗೆ ಪೈಲಟ್ ಒಬ್ಬರು ಹೇಳಿರುವ ವಿಡಿಯೋವನ್ನು ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿದೆ. ಇದು ಎಷ್ಟು ನಿಜವೋ ಎಂಬುದು ಇನ್ನು ತಿಳಿದುಬಂದಿಲ್ಲ.
ಜೈಷ್ ಉಗ್ರರ ಮೇಲೆ ದಾಳಿ ನಡೆಸಿದ ಬಳಿಕ ಭಾರತದ ಸೈನಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಸೇನೆ ಇಂದು ಬೆಳಗ್ಗೆ ದಾಳಿ ಮಾಡಿದೆ. ಈ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಭಾರತ ಪ್ರತಿದಾಳಿ ನಡೆಸುವ ವೇಳೆ ಪಾಕಿಸ್ತಾನದ ಒಂದು ವಿಮಾನ ಪತನವಾಗಿದೆ ಎಂಬ ವರದಿಗಳು ಬಂದಿವೆ.
ಪಾಕ್ ವಾಯುಸೇನೆಯನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ನಮ್ಮ ಮಿಗ್ ವಿಮಾನ ಪತನಗೊಂಡಿದ್ದು ಪೈಲಟ್ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲಟ್ ನಮ್ಮ ಬಳಿ ಇದ್ದಾರೆ ಎಂದು ಹೇಳುತ್ತಿದೆ. ಈ ಮಾಹಿತಿಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ.