ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತ್ತಿದ್ದಾಗ ಬೋಧಿ ಸತ್ವ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದ. ವಯಸ್ಸು ಸಾಗಿದಂತೆ ಸಕಲ ವಿದ್ಯೆಗಳಲ್ಲು ಪಾರಂಗತನಾದ. ಅನಂತರ ತಾರುಣ್ಯದಲ್ಲೇ ವೈರಾಗ್ಯವನ್ನು ತಾಳಿ ಹಿಮಾಲಯಕ್ಕೆ ಹೋದ ಅಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದುಕೊಂಡು ಜೀವಿಸುತ್ತಿದ್ದ .
ಇತ್ತ ಕಾಶಿಯಲ್ಲಿ ಬ್ರಹ್ಮದತ್ತನಿಗೆ ಸಕಲರೂ ತನ್ನ ಸದ್ಗುಣಗಳನ್ನೇ ಹಾಡಿ ಹೋಗಳತ್ತಿರುವುದನ್ನು ಕೇಳಿ ಕೇಳಿ ಒಂದು ಸಂದೇಹ ಬಂತು. ‘’ಪ್ರತಿಯೊಬ್ಬರೂ ನನ್ನನ್ನೂ ಹೊಗಳುತ್ತಾರೆ, ಕೀರ್ತಿಸುತ್ತಾರೆ. ಅಂದರೆ ನಾನು ಸರ್ವಗುಣ ಸಂಪನನ್ನೇ?ನನ್ನಲ್ಲಿ ಯಾವ ದೋಷವು ಇಲ್ಲವೇ?ಇದ್ದರೂ, ಕಂಡರೂ, ಯಾರೂ ಅದನ್ನು ನನ್ನ ದಾಕ್ಷೀಣ್ಯದಿಂದ ಹೇಳುತ್ತಿಲ್ಲವೇ?’’ ಎಂದುಕೊಂಡ.
ಯಾರಾದರೊಬ್ಬರಿಗೆ ತನ್ನಲ್ಲಿರುವ ದೋಷ ಕಾಣಿಸಬಹುದು, ಯಾರಾದರೊಬ್ಬರಿಗೆ ತನ್ನ ಕೊರತೆಯನ್ನು ಧೈರ್ಯವಾಗಿ ಆಡಿ ತೋರಿಸಬಹುದು, ಎಂದು ಅವನು ಹುಡುಕತೊಡಗಿದ. ಮೊದಲು ಅವನು ತನ್ನ ಪರಿವಾರದಲ್ಲಿ ಹುಡುಕಿದ.
ಆದರೆ ಅವರಲ್ಲಿ ಯಾರೂ ರಾಜನಲ್ಲಿ ದೋಷವಿದೆಯೆಂದು ಹೇಳಲಿಲ್ಲ ಅರಮನೆಯ ಪರಿವಾರದವರು ದೋಷ ಕಂಡವರು ಯಾರೂ ಇರಲಿಲ್ಲ. ನಗರದ ಹೊರಗೆ ವೇಷ ಮರೆಸಿಕೊಂಡು ಸಂಚಾರ ಮಾಡಿದ ಅಲ್ಲೂ ಕೂಡ ಎಲ್ಲ ಅವನ ಗುಣಗಾನ ಮಾಡಿದರೇ ಹೊರತು, ಒಬ್ಬನಾದರೂ ರಾಜನ ನಡತೆಯಲ್ಲಿ ಈ ತಪ್ಪಿದೆ ಎಂದು ಹೇಳಲಿಲ್ಲ.
ಕಡೆಗೆ ಅವನು ಹಿಮಾಲಯಕ್ಕೆ ಹೋದ. ಆ ಗುಡ್ಡ ಗಾಡಿನ ತುಂಬಾ ಸಂಚರಿಸಿದ. ಕಡೆಗೆ ಬೋಧಿಸತ್ವನ ಪರ್ಣಕುಟೀರ ಕಣ್ಣಿಗೆ ಬಿತ್ತು. ರಾಜ ಅಲ್ಲಿಗೆ ಹೋಗಿ ಅವನಿಗೆ ನಮಸ್ಕರಿಸಿ ಕುಳಿತುಕೊಂಡ. ಬೋಧಿಸತ್ವ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಂಡ.
ಬೋಧಿಸತ್ವ ಆಗ ಕಾಡಿನಿಂದ ತಂದಿದ್ದ ಅರಳಿ ಹಣ್ಣುಗಳನ್ನು ತಿನ್ನುತ್ತಿದ್ದ. ಅವನ್ನೇ ರಾಜನಿಗೆ ನೀಡಿ, ‘’ಅಯ್ಯಾ, ಹಸಿದಿರುವಂತಿದೆ, ಈ ಅರಳಿ ಹಣ್ಣುಗಳನ್ನು ತಿಂದು ನೀರು ಕುಡಿ’’ ಎಂದ.
ರಾಜ ಹಾಗೇ ಮಾಡಿದ. ಆ ಅರಳಿ ಹಣ್ಣುಗಳು ಅಮೃತದಂತಿದ್ದವು. ‘’ಪೂಜ್ಯರೆ, ಈ ಹಣ್ಣುಗಳು ಇಷ್ಟೊಂದು ಮಧುರವಾಗಿರಲು ಕಾರಣವೇನು?’’ ಎಂದು ಕೇಳಿದ.
ಬೋಧಿಸತ್ವ ಹೇಳಿದ, ‘’ಈ ಪ್ರಾಂತ್ಯವನ್ನು ಆಳುತ್ತಿರುವ ರಾಜ ಧರ್ಮವನ್ನು ಮೀರದೆ, ನ್ಯಾಯದಿಂದ ನಡೆದುಕೊಳ್ಳುತ್ತಿದ್ದಾನೆ. ಅದಕ್ಕೇ ಈ ಹಣ್ಣುಗಳು ಇಷ್ಟು ಸಿಹಿಯಾಗಿವೆ.’’
‘’ಪೂಜ್ಯರೆ’’ ಬೋಧಿಸತ್ವ ಹೇಳಿದ, ‘’ಸಿಹಿ ಕೊಡುವ ಪದಾರ್ಥಗಳು ತಮ್ಮ ಸಿಹಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ಇಡೀ ದೇಶವೇ ಸತ್ವವನ್ನು ಕಳೆದುಕೊಂಡು ನಾಶವಾಗುತ್ತದೆ.’’
ರಾಜ ತನ್ನ ಪರಿಚಯವನ್ನು ಹೇಳಿಕೊಳ್ಳದೆ ನಮಸ್ಕರಿಸಿ ಅಲ್ಲಿಂದ ಹೊರಟು ಬಂದ.
ಬೋಧಿಸತ್ವನ ಹೇಳಿದ ಮಾತುಗಳನ್ನು ಪರೀಕ್ಷಿಸುವ ಮನಸ್ಸಾಯಿತು. ರಾಜ ಅಂದಿನಿಂದ ಅಧರ್ಮದಿಂದ ರಾಜ್ಯಭಾರ ಮಾಡುತ್ತ ಅನ್ಯಾಯದಿಂದ ನಡೆದುಕೊಳ್ಳತೊಡಗಿದ.
ಕೆಲವು ಕಾಲದ ನಂತರ ಮತ್ತೆ ಅವನು ಬೋಧಿಸತ್ವನ ಬಳಿಗೆ ಬಂದು ನಮಸ್ಕರಿಸಿ ಕುಳಿತುಕೊಂಡ. ಆ ದಿನವೂ ಬೋಧಿಸತ್ವ ಅವನಿಗೆ ಅರಳಿ ಹಣ್ಣುಗಳನ್ನು ಕೊಟ್ಟ ಅದನ್ನು ಬಾಯಿಗಿಟ್ಟುಕೊಂಡ ಕೂಡಲೇ ಕಹಿಯಾಗಿ ರಾಜ ತಿನ್ನಲಾರದೆ ಉಗಿದುಬಿಟ್ಟ. ‘’ಪೂಜ್ಯರೇ, ಈ ಹಣ್ಣುಗಳನ್ನು ತಿನ್ನಲಾರದಷ್ಟು ಕಹಿಯಗಿವೆ’’ ಎಂದ.
ಬೋಧಿಸತ್ವ ಹೇಳಿದ, ‘’ಹಾಗಾದರೆ ರಾಜ ನಿಜವಾಗಲೂ ಅಧರ್ಮಿಯಗಿರಬೇಕು. ಅದರಿಂದಲೇ ಹಣ್ಣುಗಳನ್ನು ತಮ್ಮ ಸಿಹಿ ಕಳೆದುಕೊಂಡಿದೆ. ರಾಜ ಅಧಾರ್ಮಿಕನಾದರೆ ಇಡೀ ಪ್ರಜಸಮೂಹಂ ಅಧರ್ಮಚರಣೆ ಮಾಡುತ್ತ ದೇಶವೇ ದುಃಖಕ್ಕೆ ಒಳಗಾಗುತ್ತದೆ,’’
ರಾಜ ತನ್ನ ಪರಿಚಯವನ್ನು ಬಹಿರಂಗಪಡಿಸಿದ. ‘’ಪೂಜ್ಯರೇ, ನಾನೇ ಅರಳಿ ಹಣ್ಣನ್ನು ಸಿಹಿ ಮಾಡಿದೆ. ಅನಂತರ ನಾನೇ ಅದನ್ನು ಕಹಿ ಮಾಡಿದೆ. ಈಗ ಮತ್ತೆ ಸಿಹಿ ಮಾಡುತ್ತೇನೆ’’ ಎಂದು ನಮಸ್ಕರಿಸಿದ.
ಹಿಂದಿರುಗಿ ಕಾಶಿಗೆ ಹೋಗಿ ಧರ್ಮದಿಂದ ರಾಜ್ಯಭಾರ ಮಾಡಿದ.