ಸುದ್ದಿ

ಬೀಳುವ ಹಂತದಲ್ಲಿ ಶಿಥಿಲಗೊಂಡಿದ್ದ ಸರ್ಕಾರೀ ಶಾಲೆಯ ಅಭಿವೃದ್ಧಿಗೆ ಮುಂದಾದ ಸಂಸದ ಜಿಸಿ ಚಂದ್ರಶೇಖರ್..!

By admin

August 06, 2019

ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಶಿವಜಿನಗರದ ತಿಮ್ಮಯ್ಯ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ದನದ ಕೊಟ್ಟಿಗೆಯಂತಿರುವ ಕಟ್ಟಡ, ಉಸಿರುಕಟ್ಟುವ ವಾತಾವರಣ, ನೊಣ-ಸೊಳ್ಳೆಗಳ ಕಾಟ, ಇನ್ನು ಮಳೆ ಬಂದಾಗಲೆಲ್ಲ ಕಿಟಕಿ- ಬಾಗಿಲು, ಹೆಂಚುಗಳ ಮೂಲಕ ಸೋರುವ ಮಳೆ ನೀರಿನ ಜತೆಗೆ ಪಕ್ಕದಲ್ಲೇ ಹರಿಯುವ ಚರಂಡಿಯ ದುರ್ವಾಸನೆ. ಇದರ ಜತೆಗೆ ನೊಣ-ಸೊಳ್ಳೆಗಳ ಕಾಟ. ಇದು ಶಿವಾಜಿನಗರ ಸರ್ಕಾರಿ ಶಾಲೆ ಅನುಭವಿಸುತ್ತಿರುವ ಸಮಸ್ಯೆಯಾಗಿದೆ..

ಅಷ್ಟೇ ಅಲ್ಲದೆ ಶಾಲೆಯಲ್ಲಿ ಒಂದು ಸುಸಜ್ಜಿತ ಶೌಚಾಲಯವಿಲ್ಲ. ಮಕ್ಕಳಿಗೆ ಕುಡಿವ ನಿರಿನ ವ್ಯವಸ್ಥೆ ಕೂಡ ಇಲ್ಲ. ಹೆಣ್ಣು ಮಕ್ಕಳು ಶೌಚಲಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಶಾಲೆಯ ಆವರಣದಲ್ಲಿರುವ ಶಿಥಿಲಗೊಂಡ ಕಟ್ಟಡ ತೆರವುಗೊಳಿಸದೆ ಇರುವ ಪರಿಣಾಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿಥಿಲಗೊಂಡಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆಯ ನವೀಕರಣ ಕಾರ್ಯಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿಕೊಳ್ಳುತ್ತಲೇ ಇದ್ದರೂ ಯಾವೊಬ್ಬ ರಾಜಕಾರಣಿಗಳು ಕೂಡ ಇತ್ತ ಗಮನ ಹರಿಸಿರಲಿಲ್ಲ. ಇದೀಗ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಶಾಲೆಯ ಪುನರ್ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ..

ಮೂಲ ಭೂತ ಸೌಕರ್ಯಗಳು ಇಲ್ಲದ ಈ ಶಾಲೆಯನ್ನು ಪುನರ್ ನಿರ್ಮಾಣ ಮಾಡಿ ಮಾದರಿ ಶಾಲೆಯನ್ನಾಗಿ ಮಾಡಲು ಸಂಸದ ಜಿಸಿ ಚಂದ್ರಶೇಖರ್ ನಿರ್ಧರಿಸಿದ್ದಾರೆ. ಈ ಕಾರ್ಯಕ್ಕಾಗಿ ತಗಲುವ ವೆಚ್ಚವನ್ನು ನಮ್ಮ ಸಂಸದರ ನಿಧಿಯಿಂದ ಬರಿಸಲು ತೀರ್ಮಾನಿಸಿದ್ದು ಈ ನಿರ್ಬಂಧಗಳನ್ನು ಹೊರಡಿಸುವಂತೆ ಜಿ.ಸಿ.ಚಂದ್ರಶೇಖರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸರ್ಕಾರೀ ಶಾಲೆಗಳ ಉಳಿವಿಗೆ ಕೈ ಜೋಡಿಸಿದ್ದಾರೆ. 

ಇನ್ನು ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೂಡ ಬರೆದುಕೊಂಡಿರುವ ಸಂಸದರು “ಬೆಂಗಳೂರು ಕೇಂದ್ರ ಭಾಗದಲ್ಲಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆ ಆಗರ , ಸೋಶಿಯಲ್ ಮೀಡಿಯಾದಲ್ಲಿ ಕಂಡ ಗೆಳೆಯ ಸಯ್ಯದ್ ಹುಸೆನ್ನ್ ನನ್ನ ಗಮನಕ್ಕೆ ತಂದಿದ್ದು , ಈ ಶಾಲೆಯನ್ನು ಮಾದರಿ ಶಾಲೆಯಾಗಿ ಮಾಡಲು ತಗಲುವ ವೆಚ್ಚವನ್ನು ನಮ್ಮ ಸಂಸದರ ನಿಧಿಯಿಂದ ಬರಿಸಲು ನಿರ್ಧರಿಸಿದ್ದೇನೆ.” ಎಂದು ಟ್ವೀಟ್ ಮಾಡಿದ್ದಾರೆ