ಸುದ್ದಿ

ಬಿಲ್ಡಿಂಗ್ ಕುಸಿದು 6 ಮಂದಿ ಸೇನಾ ಸಿಬ್ಬಂದಿ ಸೇರಿ ಓರ್ವ ನಾಗರೀಕ ಸಾವು ; ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ…..!

By admin

July 15, 2019

ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್‍ನಲ್ಲಿ ನಡೆದಿದೆ.ಭಾನುವಾರ ಸೋಲನ್ ಜಿಲ್ಲೆಯಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ 37 ಮಂದಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ರಾಜ್ಯ ರಾಜಧಾನಿ ಶಿಮ್ಲಾದಿಂದ 45 ಕಿ.ಮೀ ದೂರದಲ್ಲಿರುವ ಸೋಲನ್‍ನ ಕುಮಾರ್ಹಟ್ಟಿ-ನಹಾನ್ ಹೆದ್ದಾರಿಯಲ್ಲಿ ಈ ಕಟ್ಟಡ ಇದ್ದು, ಭಾರೀ ಮಳೆಯಿಂದಾಗಿ ಕುಸಿದಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಇಲ್ಲಿಯವರೆಗೆ ಸುಮಾರು 17 ಸೇನಾ ಸಿಬ್ಬಂದಿ ಮತ್ತು 11 ನಾಗರಿಕರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಅವಶೇಷದಡಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಇಂದು ಮಧ್ಯಾಹ್ನದೊಳಗೆ ಪೂರ್ಣಗೊಳಿಸಲಾಗುವುದು. ಈ ಘಟನೆಯಲ್ಲಿ ಆರು ಸೇನಾ ಸಿಬ್ಬಂದಿ ಮತ್ತು ಸಾರ್ವಜನಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಸೋಲನ್‍ನ ಉಪ ಆಯುಕ್ತ ಕೆ.ಸಿ.ಚಮನ್ ತಿಳಿಸಿದ್ದಾರೆ.

ಘಟನೆ ನಡೆದಾಗ ಒಟ್ಟು 30 ಸಿಬ್ಬಂದಿ ಮತ್ತು ಇತರೆ ಕೆಲವರು ಕಟ್ಟಡದಲ್ಲಿದ್ದರು ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‍ಎಫ್) ಸಿಬ್ಬಂದಿ ನಡೆಸುತ್ತಿದ್ದಾರೆ.ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆ ಹಾಗೂ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.