ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸಲಾಗುತ್ತಿದ್ದು, ಅಂತರ್ಜಾಲದ ಮೂಲಕ ಪಡಿತರ ಚೀಟಿ ಪಡೆಯಬಹುದಾಗಿದೆ. ಜೊತೆಗೆ ರಾಜ್ಯದ ಯಾವುದೇ ಮೂಲೆಯಲ್ಲಿ ವಾಸವಾಗಿದ್ದರೂ, ಆ ಪ್ರದೇಶದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳ ಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಂತರ್ಜಾಲ ಸಂಪರ್ಕ ಕಲ್ಪಿಸಿ, ಬಯೋಮೆಟ್ರಿಕ್ ಪದ್ಧತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ ಎಂದರು. ಸಾರ್ವಜನಿಕರು ಪಡಿತರ ಚೀಟಿಯನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸ್ಪೀಡ್ ಪೋಸ್ಟ್ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಸಚಿವರು ವಿವರಿಸಿದರು. ಸರ್ಕಾರ ಬಿಪಿಎಲ್ ಮತ್ತು ಎಪಿಎಲ್ ಬದಲಾಗಿ ಆದ್ಯತಾ ಮತ್ತು ಆದ್ಯತಾ ರಹಿತ ಕುಟುಂಬಗಳೆಂದು ಗುರ್ತಿಸಲಾಗಿದ್ದು, 1.20 ಲಕ್ಷ ರೂ. ಆದಾಯ ಮಿತಿ ಹೊಂದಿರು ವವರನ್ನು ಆದ್ಯತಾ ಕುಟುಂಬವೆಂದು, ಉಳಿದಂತೆ ಆದ್ಯತಾ ರಹಿತ ಕುಟುಂಬ ಎಂದು ಗುರುತಿಸಲಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಗೋದಾಮುಗಳಲ್ಲಿಯೂ ಬಯೋಮೆಟ್ರಿಕ್ ಅಳವಡಿಸಲಾಗುತ್ತಿದೆ. ಇದರಿಂದ ಗೋದಾ ಮುನಿಂದ ನ್ಯಾಯಬೆಲೆ ಅಂಗಡಿಗಳಿಗೆ ಎಷ್ಟು ಆಹಾರ ಪೂರೈಕೆಯಾಗಿದೆ. ನ್ಯಾಯಬೆಲೆ ಅಂಗಡಿಗಳಿಂದ ಎಷ್ಟರ ಮಟ್ಟಿಗೆ ಆಹಾರ ವಿತರಣೆಯಾಗಿದೆ ಎಂಬ ಮಾಹಿತಿ ದೊರೆಯಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಅಭಿಪ್ರಾಯ ಪಟ್ಟರು.
ರಾಜ್ಯದಲ್ಲಿ ಹತ್ತೂವರೆ ಲಕ್ಷ ಬೋಗಸ್ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ನಕಲಿ ಕಾರ್ಡ್‌ಗಳಿಗೆ ಅವಕಾಶವಿರುವುದಿಲ್ಲ ಎಂದರು. ಆದರೂ ಬೋಗಸ್ ಕಾರ್ಡ್ ಪಡೆದಿರುವ ಬಗ್ಗೆ ಮಾಹಿತಿ ನೀಡಿದರೆ ಅಂತವರಿಗೆ 4೦೦ ರೂ., ಹಾಗೆಯೇ ಕಾಳಸಂತೆ ಆಹಾರ ಪತ್ತೆ ಹಚ್ಚುವವರಿಗೆ ಬಹುಮಾನ ನೀಡಲಾಗುವುದು ಎಂದು ಸಚಿವರು ನುಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೌಲಭ್ಯಗಳು ಆದ್ಯತಾ ಹಾಗೂ ಆದ್ಯತಾ ರಹಿತ ಕುಟುಂಬಗಳಿಗೆ ತಲುಪಬೇಕು ಎಂದರು. ಯಾವುದೇ ರೀತಿಯ ದೂರುಗಳು ಕೇಳಿ ಬರದಂತೆ ನೋಡಿಕೊಳ್ಳಲಾಗುವುದು.ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿದರೆ ಒಂದು ವಾರದಲ್ಲಿ ಪಡಿತರ ಚೀಟಿ ನೀಡಬೇಕು. ಈಗಾಗಲೇ ಈ ಪ್ರಕ್ರಿಯೆಯು ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಆರಂಭಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ಎಲ್ಲಾ ಪಡಿತರ ಚೀಟಿಗೆ ಆಧಾರ್ ಜೋಡಣಾ ಕಾರ್ಯವು ನಡೆದಿದೆ. ಜಿಲ್ಲೆಯಲ್ಲಿ ಶೇ.50ರಷ್ಟು ಕಾರ್ಯ ಪೂರ್ಣಗೊಂಡಿದೆ ಎಂದು ಸಚಿವರು ತಿಳಿಸಿದರು. ಹಾಗೆಯೇ ಸಿರಿಧಾನ್ಯ ಬೆಳೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ರಾಗಿ ಮತ್ತು ಜೋಳ ಖರೀದಿ ಮಾಡಲಾಗುತ್ತಿದೆ. ಬೇಡಿಕೆ ಇರುವ ಕಡೆ ರಾಗಿ ಮತ್ತು ಜೋಳವನ್ನು ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲಾಗುವುದು ಎಂದರು.
ಮುಖ್ಯಮಂತ್ರಿ ಅವರ ಅನಿಲಭಾಗ್ಯ ಯೋಜನೆಯಡಿ ಫಲಾನುಭವಿಗಳ ಪಟ್ಟಿ ಪಡೆಯ ಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಕಾರ್ಮಿಕರಿಗೆ ಈ ಸೌಲಭ್ಯ ನೀಡಲಾಗುತ್ತದೆ ಎಂದರು.