ಬಿಗ್ ಬಾಸ್ ಸೀಸನ್-6 ಕೊನೆಯಾಗುವುದಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಕಳೆದ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಭೇಟಿ ನೀಡಿದ್ದರು. ಆದರೆ ಈಗ ಹಳೆಯ ಸೀಸನ್ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ನೀಡಿದ್ದಾರೆ. ಆದರೆ ಅವರಿಗಾಗಿ ಇಲ್ಲಿ ವಿಶೇಷ ಮನೆಯನ್ನು ನಿರ್ಮಿಸಲಾಗಿದೆ.
ಬಿಗ್ ಬಾಸ್ ಸೀಸನ್-4 ಸ್ಪರ್ಧಿ ವಿನ್ನರ್, ಒಳ್ಳೆ ಹುಡುಗ ಪ್ರಥಮ್, ರನ್ನರಪ್ ಕಿರಿಕ್ ಕೀರ್ತಿ ಹಾಗೂ ಸಂಜನಾ ಚಿದಾನಂದ್ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ -5ರ ಸ್ಪರ್ಧಿಗಳಾದ ಸಮೀರ್ ಆಚಾರ್ಯ ಹಾಗೂ ನಟಿ ಕೃಷಿ ತಾಪಂಡ ದೊಡ್ಡ ಮನೆಯ ಹೊಸ ಕೋಣೆಗೆ ಪ್ರವೇಶ ಪಡೆದಿದ್ದಾರೆ.
ಈ ಐದು ಸ್ಪರ್ಧಿಗಳಿಗೆ ವಿಶೇಷ ಕೋಣೆಯನ್ನು ನಿರ್ಮಿಸಲಾಗಿದ್ದು, ಮನೆಗೆ ಬಂದ ಹಳೆಯ ಸ್ಪರ್ಧಿಗಳು ತಮ್ಮ ಸಹ ಸ್ಪರ್ಧಿಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಪ್ರಥಮ್ ತನ್ನ ಗೆಳೆಯ ಕಿರಿಕ್ ಕೀರ್ತಿಯನ್ನು ನೋಡುತ್ತಲೇ ತಬ್ಬಿಕೊಂಡು ಎಂದಿನಂತೆ ಕಿರುಚಾಡಿದ್ದಾರೆ. ಮತ್ತೆ ಕೆಲವರು ಬಿಗ್ ಬಾಸ್ ಮನೆಗೆ ಬಂದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿ ಟಾಸ್ಕ್ ಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ದರು. ಆದರೆ ಈಗ ಈ ಐದು ಹಳೆಯ ಸ್ಪರ್ಧಿಗಳನ್ನು ವಿಶೇಷ ಮನೆಯಲ್ಲಿ ಮಾಡಿರುವುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಈ ಹಳೆ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುತ್ತಾರಾ ಇಲ್ಲವಾ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.