ಸುದ್ದಿ

ಬಿಎಂಟಿಸಿ ಸಾರಿಗೆ ಇಲಾಖೆ ಇಂದ ಮಹಿಳಾ ಪ್ರಯಾಣಿಕರಿಗೊಂದು’ಸಂತಸದ ಸುದ್ದಿ’…!

By admin

October 12, 2019

ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯ ಅಭಯ ನೀಡಲು ಬಿಎಂಟಿಸಿ ಮುಂದಡಿ ಇಟ್ಟಿದೆ. ಬಸ್‌ಗಳು ಮತ್ತು ನಿಲ್ದಾಣಗಳನ್ನು ಮಹಿಳಾ ಸ್ನೇಹಿಯನ್ನಾಗಿಸಿ, ಸುರಕ್ಷತೆಯ ಭಾವನೆ ಮೂಡಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಬಿಎಂಟಿಸಿ ನಿಲ್ದಾಣಗಳಲ್ಲಿ ಹಲವು ಸೌಲಭ್ಯ ಒಳಗೊಂಡ ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲು ಯೋಜಿಸಲಾಗಿದೆ.

ಖರ್ಚಾಗದೇ ಉಳಿದಿರುವ ನಿರ್ಭಯಾ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಬಿಎಂಟಿಸಿಯಿಂದ ಮಹಿಳೆಯರ ವಿಶ್ರಾಂತಿ ಗೃಹ ಆರಂಭಿಸಲಾಗುವುದು. ಕೇಂದ್ರ ಸರಕಾರವು ‘ನಿರ್ಭಯಾ’ ಯೋಜನೆಯಡಿ 56.50 ಕೋಟಿ ರೂ. ಅನುದಾನವನ್ನು ಬಿಎಂಟಿಸಿಗೆ ಮಂಜೂರು ಮಾಡಿದೆ. ಈ ಅನುದಾನದಲ್ಲಿ ಮಹಿಳಾ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಸಂಬಂಧ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಕೆಂಪೇಗೌಡ ಬಸ್‌ ನಿಲ್ದಾಣ, ಶಾಂತಿನಗರ, ಶಿವಾಜಿನಗರ, ಬನಶಂಕರಿ, ಜಯನಗರ, ವಿಜಯನಗರ, ದೊಮ್ಮಲೂರು, ವೈಟ್‌ಫೀಲ್ಡ್‌, ಕೆಂಗೇರಿ ಸೇರಿದಂತೆ 15 ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ದಣಿವಾರಿಸಿಕೊಳ್ಳಲು ವಿರಾಮ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಶುದ್ಧ ಕುಡಿಯುವ ನೀರು, ಫ್ಯಾನ್‌, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಸವಲತ್ತು ಕಲ್ಪಿಸಲಾಗುತ್ತಿದೆ. ಪ್ರತಿ ಕೊಠಡಿಯಲ್ಲಿ 10-15 ಆಸನಗಳನ್ನೂ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ಮಹಿಳೆಯರು ಬಸ್‌ಗಾಗಿ ಕಾದು ನಿಲ್ಲುವುದು ತಪ್ಪಲಿದೆ.

ಬಿಎಂಟಿಸಿಗೆ 33.64 ಕೋಟಿ ರೂಪಾಯಿ ಅನುದಾನ  ಬಂದಿದೆ.ಅದರಲ್ಲಿ 2.37 ಕೋಟಿ ರೂಪಾಯಿ ಖರ್ಚಾಗಿದೆ. ಉಳಿದ 31.27 ಕೋಟಿ ರೂಪಾಯಿ ಅನುದಾನವನ್ನು ಬಳಸಿಕೊಂಡು ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲಾಗುವುದು. ಬಿಎಂಟಿಸಿ 14 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ನಿರ್ಮಾಣ ಮಾಡಲಿದ್ದು, ಕುಡಿಯುವ ನೀರು, ಫೀಡಿಂಗ್ ಕೊಠಡಿ, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ, ಶೌಚಗೃಹ, ವೈಫೈ ಸೌಲಭ್ಯ ಮಾಹಿತಿ ಪ್ರದರ್ಶನ ಮೊದಲಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ.1000 ಬಸ್ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು. ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಲಾಗಿದೆ.