‘ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲಿ ಒಂದಷ್ಟು ಜನ ಸ್ಪರ್ಧಿಗಳಾಗಿ ಎಂಟ್ರಿ ನೀಡಿದರೆ, ಮತ್ತೊಂದಿಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೀಡುತ್ತಾರೆ. ಜತೆಗೆ ಸಿನಿಮಾ ಪ್ರಮೋಷನ್‌ಗಾಗಿ ಅನೇಕರು ಬಿಗ್‌ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್‌ಬಾಸ್ ಮನೆಗೆ ಕಾಲಿಟ್ಟರೆ ಅಚ್ಚರಿ ಇಲ್ಲ!
ಇಂಥದ್ದೊಂದು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿಗಷ್ಟೇ ನಡೆದ ‘ಬಿಗ್‌ಬಾಸ್’ ಪ್ರೆಸ್‌ಮೀಟ್‌ನಲ್ಲಿ ಸಲ್ಮಾನ್ ಆಗಮನದ ಬಗ್ಗೆ ಸುದೀಪ್ ಕ್ಲಾರಿಟಿ ನೀಡಿದ್ದಾರೆ. ‘ನಾವಿಬ್ಬರು ಒಂದೇ ದಿನ ಬಿಗ್‌ಬಾಸ್‌ನ ಬೇರೆ ಬೇರೆ ಆವೃತ್ತಿಗಳ ಶೂಟಿಂಗ್‌ನಲ್ಲಿ ಬಿಜಿ ಆಗಿರುತ್ತೇವೆ. ಅವರಿಲ್ಲಿ ಬರಲು ಸಾಧ್ಯವಿಲ್ಲ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಆದರೆ, ಒಂದು ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದೇನೆಂದರೆ, ಕನ್ನಡದ ಬಿಗ್‌ಬಾಸ್‌ಗೆ ಸುದೀಪ್ ನಿರೂಪಕರಾದರೆ, ಹಿಂದಿ ಬಿಗ್‌ಬಾಸ್‌ಗೆ ಸಲ್ಮಾನ್ ನಿರೂಪಕರು. ಸದ್ಯ ಅವರ ಸಾರಥ್ಯದಲ್ಲೀಗ ಬಿಗ್‌ಬಾಸ್ ಸೀಸನ್ 13 ಆರಂಭಗೊಂಡಿದೆ. ಇಬ್ಬರಿಗೂ ಬಿಗ್‌ಬಾಸ್ ವೇದಿಕೆ ಹೊಸದೇನಲ್ಲ.
ಜತೆಗೆ ‘ದಬಾಂಗ್ 3’ ಚಿತ್ರದ ಮೂಲಕ ಸಲ್ಮಾನ್ ಖಾನ್ ಚೊಚ್ಚಲ ಬಾರಿಗೆ ಕನ್ನಡಕ್ಕೂ ಕಾಲಿಡಲಿದ್ದಾರೆ. ಹೌದು, ಆ ಚಿತ್ರ ಕನ್ನಡಕ್ಕೆ ಡಬ್ ಆಗಿ ಡಿ.20ಕ್ಕೆ ತೆರೆಕಾಣಲಿದೆ. ಅದರಲ್ಲಿ ಸಲ್ಮಾನ್ ಜತೆ ಸುದೀಪ್ ಕೂಡ ನಟಿಸಿದ್ದಾರೆ. ಒಂದುವೇಳೆ, ಸಲ್ಮಾನ್ ಕನ್ನಡ ಬಿಗ್‌ಬಾಸ್‌ಗೆ ಬಂದರೆ ಸಿನಿಮಾಕ್ಕೆ ಸಾಕಷ್ಟು ಲಾಭಗಳಿವೆ ಎಂಬುದು ಕನ್ನಡದ ಅಭಿಮಾನಿಗಳ ಲೆಕ್ಕಾಚಾರ.