- 21,091 ಕೋಟಿ ರೂ. ವೆಚ್ಚದ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ಬಾಕಿ
- 73 ಕಿ.ಮೀ ಉದ್ದದ 8 ಪಥದ ಪೆರಿಫೆರಲ್ ರಿಂಗ್ ರಸ್ತೆ
- ಸುಮಾರು 38,000 ಮರಗಳ ಹನನ..!
ತುಮಕೂರು ರಸ್ತೆ, ಹೊಸೂರು ರಸ್ತೆ ಸಂಪರ್ಕಿಸುವ ಪಿಆರ್‌ಆರ್‌ಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ
ಯೋಜನೆ ಪೂರ್ಣಗೊಂಡ ನಂತರ, ಫೆರಿಫೆರಲ್ ರಿಂಗ್ ರಸ್ತೆಯು ಒಟ್ಟು 73 ಕಿ.ಮೀ ಉದ್ದ ಇರಲಿದ್ದು, ಇದು ಬೆಂಗಳೂರಿನ ಈಶಾನ್ಯ, ಪೂರ್ವ ಮತ್ತು ಆಗ್ನೇಯ ಭಾಗಗಳನ್ನು ಸಂಪರ್ಕಿಸಲಿದೆ. ನಗರದ ವಾಯುವ್ಯ, ಪಶ್ಚಿಮ ಮತ್ತು ನೈಋುತ್ಯ ಪ್ರದೇಶಗಳ ಮೂಲಕ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುವ ನೈಸ್ ರಸ್ತೆಯೊಂದಿಗೆ ಬೆಂಗಳೂರು ತನ್ನ ವ್ಯಾಪ್ತಿಯಲ್ಲಿ 116 ಕಿ. ಮೀ. ಉದ್ದದ ಬೈಪಾಸ್ ಹೊಂದಲಿದೆ.
ಬಹು ದಿನಗಳಿಂದ ಬಾಕಿ ಉಳಿದಿದ್ದ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆ ಸಂಪರ್ಕಿಸುವ 8 ಪಥದ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್)ಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ.
ಭೂ ಸ್ವಾಧೀನ ಮತ್ತು ಅನುದಾನ ಕೊರತೆಯ ಕಾರಣ ದಶಕಗಳಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಅಗತ್ಯ ಭೂಮಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಪಿಆರ್‌ಆರ್ ಯೋಜನೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಸೂಚಿಸಿದೆ.
ಯೋಜನೆಗೆ ತಾಂತ್ರಿಕ ವಿವರಗಳು ಮತ್ತು ಟೆಂಡರ್‌ಗಳನ್ನು ಅಂತಿಮಗೊಳಿಸಲು ರಾಜ್ಯ ಸರಕಾರ ಇತ್ತೀಚಿಗೆ ಎರಡು ಸಭೆಗಳನ್ನು ನಡೆಸಿದೆ. ಯೋಜನಾ ವೆಚ್ಚ 21,091 ಕೋಟಿ ರೂ. ಆಗಿದ್ದು, ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ರಸ್ತೆ ನಿರ್ಮಿಸಲು ಸರಕಾರ ಮತ್ತು ಬಿಡಿಎ ನಿರ್ಧರಿಸಿವೆ. ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಆಧಾರದ ಮೇಲೆ ಗುತ್ತಿಗೆದಾರರ ನಿರ್ಧಾರವಾಗುವ ನಿರೀಕ್ಷೆಯಿದೆ.
ಹಿಂದಿನ ಪ್ರಸ್ತಾವನೆಯಂತೆ ಯೋಜನೆಗಾಗಿ 33,000 ಮರಗಳನ್ನು ತೆರೆವುಗೊಳಿಸಬೇಕಿದೆ. ಯೋಜನೆಯ ವಿನ್ಯಾಸದಲ್ಲಿ ಬದಲಾವಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಭೂಮಿ ಸ್ವಾಧೀನದ ಕಾರಣ ಹೆಚ್ಚುವರಿ 5,000 ಮರಗಳನ್ನು ತೆರೆವುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಹೊಸ ಪ್ರಸ್ತಾವನೆಯನ್ನು ಬಿಡಿಎ ಸಲ್ಲಿಸಿದೆ ಎಂದು ತಿಳಿಸಿದರು.
15 ವರ್ಷಗಳ ಹಿಂದೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದಾಗ ಯೋಜನಾ ವೆಚ್ಚ 3 ಸಾವಿರ ಕೋಟಿ ರೂ. ಆಗಿತ್ತು. ಆದರೆ ಸುದೀರ್ಘ ವಿಳಂಬದ ಕಾರಣ ಯೋಜನಾ ವೆಚ್ಚು ಏಳು ಪಟ್ಟು ಹೆಚ್ಚಿದೆ. ಇತ್ತೀಚಿನ ಅಂದಾಜಿನ ಪ್ರಕಾರ, ಭೂಸ್ವಾಧೀನಕ್ಕೆಂದೇ 15,475 ಕೋಟಿ ರೂ. ವೆಚ್ಚವಾಗಲಿದೆ ಹಾಗೂ ಸಂಪೂರ್ಣ ಯೋಜನಾ ವೆಚ್ಚ 21,091 ಕೋಟಿ ರೂ. ನಿಗದಿಪಡಿಸಲಾಗಿದೆ.
ಪಿಆರ್‌ಆರ್ ನಿರ್ಮಾಣಕ್ಕೆ ಐರೋಪ್ಯ ಕಂಪನಿಗಳು ಮತ್ತು ಇಸ್ರೇಲಿ ಸಂಸ್ಥೆ ಆಸಕ್ತಿ ತೋರಿವೆ. ಆದರೆ ಇನ್ನೂ ಟೆಂಡರ್ ಪ್ರಕ್ರಿಯೆ ಆರಂಭವಾಗಿಲ್ಲ.