ಎರಡು ದಿನಗಳ ಹಿಂದೆ ಕಪಿಲಾ ನದಿಗೆ ಜಿಗಿದಿದ್ದ ವೃದ್ಧ, ಎಲ್ಲರಲ್ಲೂ ಭಯ ಹುಟ್ಟಿಸಿದ್ದರು. ಎರಡು ದಿನವಾದರೂ ಮರಳದ ಕಾರಣ, ಅವರ ಪ್ರಾಣಕ್ಕೇನಾದ್ರೂ ಅಪಾಯವಾಗಿತ್ತಾ ಎಂದು ಮನೆಮಂದಿಯಲ್ಲಿ ಆತಂಕ ಮನೆ ಮಾಡಿತ್ತು. ಆದ್ರೆ ಎರಡು ದಿನಗಳ ಕಾಲ ಊಟ-ತಿಂಡಿ ಬಿಟ್ಟು ನೀರಿನಲ್ಲಿ ಕುಳಿತು, ಇಂದು ಈಜಿ ಹೊರಬಂದಿದ್ದಾರೆ.
ನಂಜನಗೂಡಿನ ರೈಲ್ವೆ ಸೇತುವೆ ಮೇಲಿಂದ ಜಿಗಿದಿದ್ದ ವೆಂಕಟೇಶ್ ಎಂಬ ವೃದ್ದರು, ಎರಡು ದಿನದ ಬಳಿಕ ಈಜಿ ದಡ ಸೇರಿದ್ದಾರೆ. ಟಿವಿ5 ಜೊತೆ ಈ ಬಗ್ಗೆ ಮಾತನಾಡಿದ ವೆಂಕಟೇಶ್, ರೋಚಕ ಕ್ಷಣಗಳನ್ನ ಬಿಚ್ಚಿಟ್ಟಿದ್ದಾರೆ.
ನಂಜನಗೂಡಿನಲ್ಲಿ ಪುರೋಹಿತ ವೃತ್ತಿಯಲ್ಲಿರುವ ವೆಂಕಟೇಶ್, ಎರಡು ದಿನಗಳ ಕಾಲ ಬ್ರಿಡ್ಜ್ ಕೆಳಗೆ ಅಡಗಿ ಕುಳಿತಿದ್ದರಂತೆ, ಊಟ-ತಿಂಡಿ ಇಲ್ಲದೇ ಸುಸ್ತಾಗಿದ್ದ ವೆಂಕಟೇಶ್, ನೀರಿನ ರಭಸ ಕಡಿಮೆಯಾದ ಬಳಿಕ ಹೊರಬಂದಿದ್ದಾರೆ.
ಈ ಬಗ್ಗೆ ಮಾತನಾಡಿದ ವೆಂಕಟೇಶ್, ತಿನ್ನೋಕ್ಕೆ ಊಟ ಇಲ್ಲದೆ, ನೀರು ಕಡಿಮೆಯಾದ ಬಳಿಕ ಬಂದೆ. ಈ ರೀತಿಯ ಸಾಹಸ ನನಗೆ ಹುಟ್ಟಿನಿಂದ ಬಂದಿದೆ. ನಾನು ಸೈಕಲ್‌ನಲ್ಲಿ ಹಿಮಾಲಯಕ್ಕೆ ಹೋಗಿದ್ದೇನೆ. ನನಗೆ ಇದೆಲ್ಲ ಅಭ್ಯಾಸ ಇದೆ, ಯಾವುದೇ ಆತಂಕ ಬೇಡ. ನನಗೆ ನದಿಯಲ್ಲಿ ಈಜಾಡಿ ಬಂದು ದಡ ಸೇರುವ ಸಾಮರ್ಥ್ಯ ಇದೆ ಎಂದಿದ್ದಾರೆ.