ಬೆಂಗಳೂರು: ಸಿಲಿಕಾನ್ ಸಿಟಿ ಉದ್ಯೋಗಿಗಳಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಪ್ರಸಿದ್ಧಿ ಪಡೆದಿದ್ದ ಪೀಣ್ಯ ಕೈಗಾರಿಕಾ ಪ್ರದೇಶದ 10 ಸಾವಿರ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, 15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆಯಿದೆ. ಮಾಹಿತಿ ತಂತ್ರಜ್ಞಾನ ಆಗಮಿಸದ 80,90ರ ದಶಕದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲದೆ, ದೇಶದ ವಿವಿಧ ಭಾಗಗಳಿಂದ ಉದ್ಯೋಗ ಆರಿಸಿ ಬೆಂಗಳೂರಿಗೆ ಬರುತ್ತಿದ್ದರು. ಅವರೆಲ್ಲರಿಗೂ ಪೀಣ್ಯ ಕೈಗಾರಿಕಾ ಪ್ರದೇಶ ಆಸರೆಯಾಗಿತ್ತು.
ಆರ್ಥಿಕಹಿಂಜರಿತದಎಫೆಕ್ಟ್ : ಪೀಣ್ಯದ ಕೈಗಾರಿಕೆಗಳ ಮೇಲೆ ಸುನಾಮಿಯಂತೆ ಆರ್ಥಿಕ ಹಿಂಜರಿತ ಅಪ್ಪಳಿಸಿದ್ದು ಭಾರಿ ಸಂಕಷ್ಟ ಎದುರಾಗಿದೆ. ಅಕ್ಷರಶಃ 10 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಐಸಿಯು ಸ್ಥಿತಿಗೆ ತಲುಪಿವೆ. ಎರಡು ತಿಂಗಳಲ್ಲಿ ಕೈಗಾರಿಕಾ ವಹಿವಾಟು ಶೇ.70ರಷ್ಟು ಕುಸಿತ ಕಂಡಿದೆ.
ದೊಡ್ಡ ಕೈಗಾರಿಕೆಗಳಲ್ಲಿ ಶೇ.60ರಷ್ಟು ಮಾರಾಟ ಕುಸಿತವಾಗಿದ್ದರೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಶೇ. 90ರಷ್ಟು ವ್ಯವಹಾರ ಕಡಿಮೆಯಾಗಿದೆ. 4 ತಿಂಗಳ ಹಿಂದೆ ದಿನಕ್ಕೆ 15 ಲಕ್ಷ ವಹಿವಾಟು ಮಾಡುತ್ತಿದ್ದವರು ಈಗ 3 ಲಕ್ಷಕ್ಕೆ ಇಳಿಕೆ ಕಂಡಿದ್ದಾರೆ. ಗಾರ್ಮೆಂಟ್ಸ್, ಆಟೋ ಮೊಬೈಲ್ಸ್ ಬಿಡಿಭಾಗ, ಫ್ಯಾಬ್ರಿಕೇಷನ್-ಪ್ಯಾಕೇಜಿಂಗ್ ಇಂಡಸ್ಟ್ರಿ, ಪೌಡರ್ ಕೋಟಿಂಗ್, ಎಲೆಕ್ಟ್ರೋ ಪ್ಲೇಟಿಂಗ್ ಸೇರಿದಂತೆ 10 ಸಾವಿರ ಕಾರ್ಖಾನೆಗಳಿಗೆ ನಷ್ಟ ಉಂಟಾಗುತ್ತಿದೆ.
ದಿನಕ್ಕೆ 6 ಗಂಟೆಕೆಲಸಮಾತ್ರ : ಮೂರು ಪಾಳಿ ಬದಲು ಈಗ ದಿನಕ್ಕೆ 5 ರಿಂದ 6 ಆರು ಗಂಟೆ ಕೆಲಸ ಮಾತ್ರ ಸಿಗುತ್ತಿದೆ. ಶನಿವಾರ ಮತ್ತು ಭಾನುವಾರ ಕಡ್ಡಾಯ ರಜೆ ನೀಡಲಾಗುತ್ತಿದೆ. ಉತ್ಪಾದನೆ ಹೆಚ್ಚಿ ಮಾರಾಟ ಕುಸಿತವಾಗಿರುವುದರಿಂದ ಭಾರೀ ಸಂಕಷ್ಟ ಎದುರಾಗಿದೆ.ಯಾವುದೇ ಕ್ಷಣದಲ್ಲೂ ಈ ಕಾರ್ಖಾನೆಗಳು ಮುಚ್ಚಿ ಹೋಗುವುದು ನಿಜವಾಗಲಿದೆ. ಉದ್ಯೋಗ ಕಳೆದುಕೊಳ್ಳೋ 15 ಲಕ್ಷ ಮಂದಿಯಲ್ಲಿ 4 ಲಕ್ಷ ಮಹಿಳೆಯರಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಕೈಗಾರಿಕೆಗಳನ್ನೇ ಅವಲಂಬಿಸಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿರುವುದರಿಂದ ಮುಂದಿನ ದಿನಗಳು ಹೇಗೆ ಎಂಬ ಚಿಂತೆಯಲ್ಲಿ ದಿನ ದೂಡುವ ಸ್ಥಿತಿ ಎದುರಾಗಿದೆ.