ತಂತ್ರಜ್ಞಾನ

ಪಾಡ್ ಕಾರ್ ಸೇವೆ ಈಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಆರಂಭ..!ತಿಳಿಯಲು ಈ ಲೇಖನಓದಿ…

By admin

November 09, 2017

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಹೊಸ ಹೊಸ ಸಾರಿಗೆ ವ್ಯವಸ್ಥೆಗಳನ್ನು ಪರಿಚಯಿಸಿದ್ರು ಟ್ರಾಫಿಕ್ ಸಮಸ್ಯೆ ಮಾತ್ರ ಯಾವುದೇ ಕಾರಣಕ್ಕೂ ಕಡಿಮೆಯಾಗುತ್ತಿಲ್ಲ. ಹೀಗಾಗಿ ಐಟಿ ಬಿಟಿ ಜನರಿಗೆ ನೇರವಾಗಬಲ್ಲ ಪಾಡ್ ಕಾರ್ ಸೇವೆಯನ್ನು ಪರಿಚಯಿಸಲಾಗುತ್ತಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ವಷಾಂತ್ಯಕ್ಕೆ ಹೊಸ ಯೋಜನೆಗೆ ಚಾಲನೆ ಸಿಗಲಿದೆ.

ಬಿಬಿಎಂಪಿ ಕೂಡಾ ಪಿಆರ್‌ಟಿಎಸ್‌ ಯೋಜನೆ ಅನುಷ್ಠಾನದ ಬಗ್ಗೆ ಹೆಚ್ಚು ಉತ್ಸುಕವಾಗಿದ್ದು, ದೇಶದ ಮೊದಲ “ಖಾಸಗಿ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಪರ್ಸನಲ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಂ) ಅನ್ನು ಆರಂಭಿಸುವ ಮೂಲಕ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹೇಳುವ ಇರಾದೆಯಲ್ಲಿದೆ.

ಯೋಜನೆಯ ವೆಚ್ಚ:-

ಪ್ರತಿ ಕಿ.ಮೀ. ಪಿಆರ್‌ಟಿಎಸ್‌ ನಿರ್ಮಾಣಕ್ಕೆ 25 ಕೋಟಿ ರೂ. ವೆಚ್ಚವಾಗಲಿದ್ದು, ಈ ಯೋಜನೆ ಅನುಷ್ಠಾನದಲ್ಲಿ ಬಿಬಿಎಂಪಿಯಿಂದ ಯಾವುದೇ ಹೂಡಿಕೆ ಇರುವುದಿಲ್ಲ. ಬದಲಿಗೆ ಪಾಲಿಕೆಗೆ ಈ ಮಾದರಿಯ ಟ್ಯಾಕ್ಸಿ ಓಡಿಸುವ ಸಂಬಂಧ ಪರವಾನಗಿ ಶುಲ್ಕ ಹಾಗೂ ಕಾರ್ಯಾಚರಣೆಯಿಂದ ಬರುವ ಆದಾಯದಲ್ಲಿ ಇಂತಿಷ್ಟು ಲಾಭಾಂಶ ಬರಲಿದೆ.

ತಜ್ಞರ ಸೂಚನೆಯಂತೆ ಬಿಬಿಎಂಪಿಯು ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಿದ್ದು, ಈ ಸಂಬಂಧ ಮುಂದಿನ ವಾರದಲ್ಲಿ ಟೆಂಡರ್‌ ಕರೆಯಲಿದೆ. ಜೊತೆಗೆ ಮೆಟ್ರೋ ಮಾದರಿಯಲ್ಲಿ ಆರ್‌ಸಿಸಿ ಕಂಬಗಳು ಮತ್ತು ಸ್ಲಾಬ್‌ ನಿರ್ಮಿಸಿ ಅದರ ಮೇಲೆ ಪಾಡ್‌ ಟ್ಯಾಕ್ಸಿಗಳ ಮಾರ್ಗ ನಿರ್ಮಿಸುವ ತಂತ್ರಜ್ಞಾನ ಸೂಕ್ತ ಎಂದು ತಜ್ಞರು ನಿರ್ಧರಿಸಿದ್ದಾರೆ.

ಏನಿದು ಪಿಆರ್‌ಟಿಎಸ್‌ ?

ಇದೊಂದು ಸಾರ್ವಜನಿಕ ಸಾರಿಗೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ನಿಗದಿತ ದೂರವನ್ನು ನಿರ್ದಿಷ್ಟ ಸಮಯದಲ್ಲಿ ಇದು ಕ್ರಮಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ಕಾರಿಡಾರ್‌ ಇರುವುದರಿಂದ ಸಂಚಾರದಟ್ಟಣೆ ಕಿರಿಕಿರಿ ಇಲ್ಲ. ಮೆಟ್ರೋ ರೈಲು ಮುಖ್ಯರಸ್ತೆಗಳಲ್ಲಿ ಮಾತ್ರ ಸಂಚರಿಸುತ್ತದೆ.

ಎಲ್ಲಿಂದ ಎಲ್ಲಿಯವರಿಗೆ ?

ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನದಟ್ಟಣೆ ಪ್ರದೇಶವಾಗಿರುವ ಎಂಜಿ ರೋಡ್ ಬಳಿಯ ಟ್ರಿನಿಟಿ ಸರ್ಕಲ್‌ನಿಂದ ವೈಟ್‌ಫೀಲ್ಡ್ ತನಕ ಪಾಡ್ ಕಾರ್ ಸೇವೆಯು ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ.

ವೈಟ್‌ಫೀಲ್ಡ್‌ ಯಾಕೆ ?

ನಗರದ ಅತ್ಯಧಿಕ ವಾಹನದಟ್ಟಣೆ, ಜನದಟ್ಟಣೆ ಇರುವ ಪ್ರದೇಶ ವೈಟ್‌ಫೀಲ್ಡ್‌.

ನಿತ್ಯ ಪೀಕ್‌ ಅವರ್‌ನಲ್ಲಿ ಜನ ಅಲ್ಲಿ ಪರದಾಡುತ್ತಾರೆ. ಜತೆಗೆ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವುದರಿಂದ, ಇಲ್ಲಿ ಬಳಕೆ ಪ್ರಮಾಣ ಬೇರೆಡೆಗಿಂತ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೀಗಿರುತ್ತೆ ಪಾಡ್‌ ಕಾರ್:-

ವಂಡರ್‌ಲಾನಲ್ಲಿ ಸಾಮಾನ್ಯವಾಗಿ ಕಂಡುಬರುವ ಡ್ಯಾಷಿಂಗ್‌ ಕಾರುಗಳಂತೆಯೇ ಇರುವ ಈ ಪಾಡ್‌ ಟ್ಯಾಕ್ಸಿಗಳು ಮ್ಯಾಗ್ನೆಟಿಕ್‌ ವ್ಹೀಲ್‌ ಮೂಲಕ ಕಾರ್ಯಾಚರಣೆ ಮಾಡುತ್ತವೆ.

ಇವುಗಳ ಉದ್ದ 4 ಮೀ. ಇರುತ್ತದೆ. ಮಾರ್ಗದಲ್ಲಿ ಪ್ರತಿ 10 ಮೀಟರ್‌ ಅಂತರದಲ್ಲಿ ಒಂದರಂತೆ ಕಾರ್ಯಾಚರಣೆ ಮಾಡುತ್ತದೆ.

ಪ್ರಯಾಣ ದರ ಕಡಿಮೆ ?

ಆಟೋ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಿಗೆ ಹೋಲಿಸಿದರೆ, ಪಿಆರ್‌ಟಿಎಸ್‌ ಟ್ಯಾಕ್ಸಿಗಳ ದರ ಅರ್ಧಕ್ಕರ್ಧ ಕಡಿಮೆ ಎನ್ನಲಾಗಿದೆ. ಆಟೋ ಪ್ರತಿ ಕಿ.ಮೀ.ಗೆ 20 ರೂ. ಆಗುತ್ತದೆ. ಟ್ಯಾಕ್ಸಿಗಳಲ್ಲಿ ಕಿ.ಮೀಗೆ 18 ರೂ. ಆಗುತ್ತದೆ. ಆದರೆ, ಪಾಡ್‌ ಟ್ಯಾಕ್ಸಿ ಪ್ರಯಾಣ ದರ ಕಿ.ಮೀಗೆ 9ರಿಂದ 10 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.