ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಯೋಧ ಹೆಚ್. ಗುರು ಹುತಾತ್ಮರಾಗಿದ್ದಾರೆ. ಅವರ ಕುಟುಂಬದಲ್ಲಿ ಈಗ ಪರಿಹಾರ ಹಣದ ವಿಚಾರ ಕುಟುಂಬ ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ.
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಗುರು ಅವರ ಕುಟುಂಬಕ್ಕೆ ಸರ್ಕಾರ, ಸಾರ್ವಜನಿಕರು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡಿವೆ. ಆದರೆ, ಪರಿಹಾರದ ಹಣವೇ ಈಗ ಕುಟುಂಬ ಸದಸ್ಯರ ಸಂಬಂಧಕ್ಕೆ ಅಡ್ಡಿಯಾಗಿದೆ. ಗುರು ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ., ಅಂಬಾನಿ ಕಂಪನಿಯಿಂದ 25 ಲಕ್ಷ ರೂ. ನೀಡಲಾಗಿದೆ.
ಇನ್ಫೋಸಿಸ್ ಫೌಂಡೇಶನ್ ನಿಂದ 10 ಲಕ್ಷ ರೂ., ನ್ಯಾಷನಲ್ ಟ್ರಾವೆಲ್ಸ್ ನಿಂದ 10 ಲಕ್ಷ ರೂ., ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ 10 ಲಕ್ಷ ರೂ. ಸೇರಿದಂತೆ ಅನೇಕರು ನೆರವು ನೀಡಿದ್ದಾರೆ. ಸುಮಲತಾ ಅಂಬರೀಶ್ ಅವರು 20 ಗುಂಟೆ ಜಮೀನು ನೀಡುವುದಾಗಿ ಹೇಳಿದ್ದಾರೆ. ಇದೇ ರೀತಿ ವಿದ್ಯಾರ್ಥಿಗಳು, ನೌಕರರು, ಸಂಘ-ಸಂಸ್ಥೆಯವರು ಗುರು ಅವರ ಕುಟುಂಬಕ್ಕೆ ನೆರವಾಗಿದ್ದಾರೆ.
ಪರಿಹಾರದ ಹಣದ ಹಂಚಿಕೆ ವಿಚಾರದಲ್ಲಿ ಗುರು ಅವರ ಪತ್ನಿ ಕಲಾವತಿ ಮತ್ತು ತಂದೆ -ತಾಯಿ ಹಾಗೂ ಸಹೋದರರ ನಡುವೆ ಘರ್ಷಣೆ ನಡೆದು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಆದರೆ, ಪೊಲೀಸರು ಈ ವಿಚಾರ ಬೇರೆಯವರಿಗೆ ಗೊತ್ತಾದರೆ, ಕೆಟ್ಟ ಸಂದೇಶ ಹೋಗುತ್ತದೆ. ತಿಥಿ ಕಾರ್ಯ ಮುಗಿದ ಬಳಿಕ ಸಮಸ್ಯೆ ಪರಿಹರಿಸುವುದಾಗಿ ಗುರು ಕುಟುಂಬದವರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.