ಪಬ್‌ಜಿ ಎಂಬ ಮಹಾಮಾರಿ ಗೇಮ್ ಎಷ್ಟೊಂದು ಡೇಂಜರಸ್ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದ್ರೂ ಸಹ ಇಂದಿನ ಯುವ ಪೀಳಿಗೆ ಈ ಗೇಮ್‌ಗೆ ಬಲಿಯಾಗುತ್ತಿದ್ದಾರೆ. ಸಾಕಷ್ಟು ಪ್ರಾಣ ಹಾನಿಗಳು ಸಹ ಆಗಿವೆ. ಅದೇ ರೀತಿ ಪಬ್‌ಜಿ ಗೇಮ್ ದಾಸನಾಗಿದ್ದ ಹದಿಹರೆಯದ ಯುವಕನೊಬ್ಬ ಮಾನಸಿಕ ಅಸ್ವಸ್ಥನಾಗಿ ಚರಂಡಿ ನೀರಲ್ಲಿ ಬಿದ್ದು ಒದ್ದಾಡಿದ್ದಾನೆ.ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿಜಯಪುರದ ಮಧ್ಯಭಾಗದಲ್ಲಿರುವ ಗಗನ್ ಮಹಲ್ ಎಂಬ ಬೃಹತ್ ಕಂದಕದಲ್ಲಿನ ಗಲೀಜು ಗಟಾರ್ ನೀರಿನಲ್ಲಿ ಬಿದ್ದು ಹೊರಳಾಡಿದ್ದಾನೆ.
ಇದನ್ನು ವಿಡಿಯೋ ಮಾಡಿಕೊಂಡ ಸ್ಥಳೀಯರು ಈತ ಮೊದಲು ಚೆನ್ನಾಗಿಯೇ ಇದ್ದ. ಇತ್ತೀಚೆಗೆ ಪಬ್‌ಜಿ ಗೇಮ್‌ಗೆ ಅಡಿಕ್ಟ್ ಆಗಿ ಹೀಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದದಲ್ಲಿ ಹರಿಬಿಟ್ಟಿದ್ದಾರೆ. ಆದ್ರೆ ಇದು ಯಾವಾಗ ನಡೆದಿದ್ದು?, ಆತ ಯಾರು?ನಿಜವಾಗಿಯೂ ಪಬ್‌ಜಿಯಿಂದಲೇ ಹೀಗಾಗಿದೆಯಾ ಎಂಬುದರ ಬಗ್ಗೆ ಖಚಿತ ಮಾಹಿತಿ ಮಾತ್ರ ಯಾರಿಗೂ ಸಿಕ್ಕಿಲ್ಲ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಪಬ್‌ಜಿಯಿಂದಲೇ ಹೀಗಾಗಿದೆ ಎಂಬುದು ಅವರ ಮನೆಯವರಿಂದ ಗೊತ್ತಾಗಬೇಕಾಗಿದೆ, ಆತ ಯಾರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾರೂ ಸಹ ಪಬ್‌ಜಿ ಗೇಮ್‌ಗೆ ದಾಸರಾಗಬಾರದು ಎಂದು ವಿಜಯಪುರ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಇಡಿ ವಿಶ್ವದಲ್ಲೇ ಬಹುತೇಕ ಯುವ ಪೀಳಿಗೆಯನ್ನು ತನ್ನ ದಾಸರನ್ನಾಗಿಸಿಕೊಂಡಿರುವ ಪಬ್‌ಜಿ ಗೇಮ್ ಅದೆಷ್ಟೋ ಜೀವಗಳನ್ನು ಹಾಗೂ ಕುಟುಂಬಗಳನ್ನು ಬಲಿ ತೆಗೆದುಕೊಂಡಿದೆ. ಇಂತಹ ಸಮಯದಲ್ಲಿ ವಿಜಯಪುರದ ಕಂದಕದಲ್ಲಿ ಬಿದ್ದು ಹೊರಳಾಡಿದ ಯುವಕನ ವಿಡಿಯೋ ನೋಡಿದವರಿಗೆಲ್ಲ ಆತಂಕ ಶುರುವಾಗಿದೆ. ಹಾಗಾಗಿ ಈ ಗೇಮ್ ಅನ್ನು ನಿಷೇಧಿಸಬೇಕು ಎಂದು ಒತ್ತಾಯಗಳು ಜೋರಾಗಿವೆ.