ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಹ ಪರಿಹಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.ಮನೆ ಹಾನಿಗೊಳಗಾದ ಸಂತ್ರಸ್ಥರಿಗೆ 5 ಲಕ್ಷ ರೂ. ನೀಡಲಿದ್ದು, ಮೊದಲ ಕಂತಿನಲ್ಲಿ ಪಡಿತರ ಚೀಟಿ ಹೊಂದಿದವರಿಗೆ 1 ಲಕ್ಷ ರೂ. ನೀಡಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಮನೆಯಲ್ಲಿ ಇಬ್ಬರು ಮೂವರು ಅಣ್ಣತಮ್ಮಂದಿರು ಇದ್ದ ಸಂದರ್ಭದಲ್ಲಿ ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ಪರಿಹಾರ ಧನ ನೀಡಲಾಗುತ್ತಿದೆ. ಒಂದು ಮನೆ ನಿರ್ಮಾಣಕ್ಕೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದ್ದು, ಇದಕ್ಕೆ ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಂದೇ ಮನೆಯಲ್ಲಿ ಅಣ್ಣ-ತಮ್ಮ ಇದ್ದಲ್ಲಿ ಪಡಿತರ ಚೀಟಿ ಇಲ್ಲದವರಿಗೆ ಪರಿಹಾರ ಧನ ವಿತರಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡಬೇಕು. ಪಡಿತರ ಚೀಟಿ ಇಲ್ಲವೆಂಬ ಕಾರಣಕ್ಕೆ ಪರಿಹಾರ ನಿಲ್ಲಿಸಬೇಡಿ.
ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ಪರಿಹಾರ ನೀಡದೆ ಒಂದೇ ಮನೆಯಲ್ಲಿ ವಾಸವಾಗಿದ್ದ ಅಣ್ಣ-ತಮ್ಮಂದಿರಿಗೆ ಪಡಿತರ ಚೀಟಿ ಇಲ್ಲದಿದ್ದರೂ ಪರಿಹಾರ ಕೊಡಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.