ಈ ಸುದ್ದಿಯ ಶೀರ್ಷಿಕೆ ಓದುವಾಗಲೇ ಓದುಗರಿಗೆ ಗೊಂದಲವಾಗಿರಬಹುದು. ಹೌದು ಇಂತಹದ್ದೊಂದು ಘಟನೆಯು ಉತ್ತರಪ್ರದೇಶ ರಾಜ್ಯದ ಬದೌನ್ ಎಂಬ ನಗರದಲ್ಲಿ ನಡೆದಿದೆ. ಆದರೆ ನೆರೆಮನೆಯ ವ್ಯಕ್ತಿಗಳು ಜಗಳವಾಡಿದರೆ ನಾಯಿ ಹೇಗೆ ಜೈಲು ಸೇರುತ್ತದೆ ಎಂಬುವುದರ ಕುರಿತು ಕುತೂಹಲವಿರಬಹುದು.
ಅದಕ್ಕೆಲ್ಲ ಉತ್ತರ ಈ ಸುದ್ದಿಯಲ್ಲಿದೆ. ಇವರು ಜಗಳವಾಡಿದ್ದು ಆ ನಾಯಿಯ ಕಾರಣಕ್ಕೇ. ನಡೆದಿದ್ದು ಏನೆಂದರೆ, ಇಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ನಾಯಿ 2 ತಿಂಗಳುಗಳಿಂದ ನಾಪತ್ತೆಯಾಗಿತ್ತು.
ನಾಯಿಯನ್ನು ಹುಡುಕಿ ಕಂಗಾಲಾಗಿದ್ದ ಇವರಿಗೆ ಪಕ್ಕದ ಮನೆಯ ಟೆರೆಸ್ ಮೇಲೆ ತನ್ನ ನಾಯಿ ಕಂಡಿತು. ಇದು ನನ್ನದೇ ನಾಯಿ. ನನಗೆಹಿಂದಿರುಗಿಸಬೇಕು ಎಂದು ಪಕ್ಕದ ಮನೆಯವನ ಜೊತೆಜಗಳಕ್ಕೆ ನಿಂತರು.
ಆದರೆ ಆತ ಈ ನಾಯಿ ನನ್ನದು, ನಾನು ಇದನ್ನು ದೀಪಾವಳಿ ದಿನ ಬರೇಲಿಯಿಂದ ತಂದೆ ಎಂದು ಪ್ರತಿವಾದ ಮಾಡಲಾರಂಭಿಸಿದ. ಈಗ ಇವರಿಬ್ಬರ ಜಗಳ ಪೊಲೀಸ್ ಠಾಣೆಗೆ ಬಂದು ನಿಂತಿದೆ. ನಾಯಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಈ ಕುರಿತು ಸಂಪೂರ್ಣ ತನಿಖೆ ನಡೆಸಿ ನಿಜವಾದ ಮಾಲೀಕರಿಗೇ ನಾಯಿಯನ್ನು ಒಪ್ಪಿಸುತ್ತೇವೆ ಎಂದಿದ್ದಾರೆ.