ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು.ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್, ಚೀನಾ ತೈವಾನ್, ಕ್ವೀನ್ಸ್‌ಲ್ಯಾಂಡ್ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಔಷಧೀಯ ಗುಣಗಳು: –
ಹಣ್ಣು ಸ್ವಲ್ಪ ಒಗರು. ಅವುಗಳನ್ನು ತಿನ್ನುತ್ತಿದ್ದಲ್ಲಿ ಹಸಿವು ಹೆಚ್ಚಾಗುತ್ತದೆ.
ಈ ಹಣ್ಣುಗಳಿಂದ ತಯಾರಿಸಿದ ಪಾನಕ ಮತ್ತು ಶರಬತ್ತುಗಳನ್ನು ಕುಡಿಯುತ್ತಿದ್ದಲ್ಲಿ ದಣಿವು ದೂರಗೊಂಡು ಶರಿರದಲ್ಲಿನ ಊತ, ಜ್ವರದ ತಾಪಗಳು ಉಪಶಮನಗೊಳ್ಳುತ್ತವೆ.
ಈ ಪಾನೀಯಗಳು ಶೈತ್ಯಕಾರಕವಿರುತ್ತವೆ. ಮೂಲವ್ಯಾಧಿ, ಸ್ಕರ್ವಿ, ಅತಿಸಾರ, ಪಿತ್ತರಸದ ತೊಂದರೆಗಳಿಗೆ ಈ ಹಣ್ಣುಗಳ ಸೇವನೆ ಲಾಭದಾಯಕ. ಹಣ್ಣುಗಳಿಗೆ ಆಯ್‌ಸ್ಕಾರ್ಬಿಕ್ ಆಮ್ಲದ ಆಮ್ಲಜನೀಕರಣವನ್ನು ತಡೆಹಿಡಿಯುವ ಗುಣವಿದೆ ಎನ್ನಲಾಗಿದೆ.
ಫಿಲಿಪ್ಪೈನ್ಸ್‌ನಲ್ಲಿ ಇವುಗಳ ಎಲೆ ಮತ್ತು ಚಿಗುರು ಕುಡಿಗಳನ್ನು ಅರೆದು ಸಿಡುಬು ರೋಗಿಗಳೆಗೆ ಕೊಡುವುದುಂಟು. ಅವುಗಳ ಸೇವನೆ ಹೊಟ್ಟೆಯಲ್ಲಿನ ಹುಳುಗಳಿಗೆ ಒಳ್ಳೆಯ ಔಷಧಿ, ತಲೆನೋವು ಇದ್ದಲ್ಲಿ ಎಲೆ ಮತ್ತು ಚಿಗುರುಗಳನ್ನು ತಿನ್ನುವುದು ಒಳ್ಳೆಯದು.
ಇತರ ಉಪಯೋಗಗಳು: –
ಈ ಹಣ್ಣು ಸಾರು ಮಾಡುವಲ್ಲಿ ಹುಣಿಸೇಹಣ್ಣಿನ ಬದಲಾಗಿ ಬಳಸುವುದುಂಟು. ಹಣ್ಣುಗಳಿಂದ ರುಚಿಕರ ಜಾಮ್, ಜೆಲ್ಲಿ, ಚಟ್ನಿ, ಉಪ್ಪಿನ ಕಾಯಿ ಮುಂತಾಗಿ ತಯಾರಿಸುತ್ತಾರೆ. ಈ ಹಣ್ಣುಗಳ ರಸಹಿಂಡಿ ಬಟ್ಟೆಗಳ ಲಿನನ್ ಬಟ್ಟೆಗಳ ಮೇಲಿನ ಕರೆಗಳನ್ನು ಹೋಗಲಾಡಿಸುವುದುಂಟು. ಹಿತ್ತಾಳೆ ಪಾತ್ರೆ ಪರಡಿಗಳನ್ನು ಬೆಳಗಿ ಅವುಗಳ ಮೇಲಿನ ಕಲೆ, ತುಕ್ಕು ಮುಂತಾಗಿ ಹೋಗಲಾಡಿಸಲು ಇವು ಬಲು ಉಪಯುಕ್ತ. ಮರದ ಒಳಕಟ್ಟಿಗೆಯನ್ನು ಪೀಠೋಪಕರಣಗಳನ್ನು ತಯಾರಿಸಲು ಬಳಸುತ್ತಾರೆ.
ಮರಗಳಿಂದ ಉದುರಿಬಿದ್ದ ಎಲೆ, ಹೂವು ಮಣ್ಣಿಗೆ ಒಳ್ಳೆಯ ಹೊದಿಕೆಯಾಗುತ್ತವೆ. ಅವು ದಿನಕಳೆದಂತೆ ಕೊಳೆತು ಗೊಬ್ಬರವಾಗಬಲ್ಲವು. ಈ ಮರಗಳು ಒಳ್ಳೆಯ ನೆರಳು ಹಾಗೂ ಅಲಂಕಾರಕ ಸಸ್ಯಗಳಾಗಿವೆ. ಬೀಜದಿಂದ ಪಡೆದ ಸಸಿಗಳನ್ನು ತೋಟದ ಸುತ್ತಂಚಿನಲ್ಲಿ ಉದ್ದಕ್ಕೆ ನೆಟ್ಟು ಬೆಳೆಸಿದರೆ ಅವು ಒಳ್ಳೆಯ ಗಾಳಿ ತಡೆಯಾಗಬಲ್ಲವು ಮತ್ತು ಮಣ್ಣು ಕೊಚ್ಚಿಹೋಗುವುದನ್ನು ತಡೆಯಬಲ್ಲವು.