ನೀರಜ್ ಜಾರ್ಜ್ ಬೇಬಿ. ಊರುಗೋಲಿನ ಸಹಾಯದಿಂದ ಅತ್ತಿಂದಿತ್ತ ಓಡಾಡುವ ಯುವಕ. ಸದ್ಯ ಇದೇ ಯುವಕ ವಿಶ್ವದ ಗಮನ ಸೆಳೆದಿದ್ದಾರೆ. ಅದು ತಮ್ಮ ಸಾಧನೆಯ ಮೂಲಕ ಕೇರಳದ ಅಲುವಾ ಮೂಲದ 32 ವರ್ಷದ ನೀರಜ್ ಜಾರ್ಜ್ ಸಂಪೂರ್ಣ ಹಿಮದಿಂದ ಆವೃತವಾದ ಆಫ್ರಿಕಾದ ಅತೀ ಎತ್ತರದ ಕಿಲಿಮಂಜಾರೋ ಪರ್ವತವನ್ನೇರಿದ್ದಾರೆ. ಈ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ.
ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ಈ ಕನಸಿನ ಈಡೇರಿಕೆಗೆ ಅತ್ಯಂತ ನೋವಿನಿಂದ ನಾನು ಐದು ವರ್ಷದಿಂದ ಕಾಯುತ್ತಿದ್ದೇನೆ’ ಎಂದು ನೀರಜ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಹಕ್ಕಿಯಂತೆ ಗರಿ ಬಿಚ್ಚಿ ಹಾರಿದಂತೆ ಕೈಗಳನ್ನು ಮೇಲೆ ಮಾಡಿ ಖುಷಿಯಿಂದ ಶಿಖರದ ತುದಿಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ, ಕೃತಕ ಕಾಲುಗಳಿಗೆ ಸರ್ಕಾರ ವಿಧಿಸಲು ಉದ್ದೇಶಿಸಿರುವ ತೆರಿಗೆಯನ್ನೂ ವಿರೋಧಿಸಿದ್ದಾರೆ. ನಾವು ವಿಶೇಷ ಚೇತನರು ಪ್ಲಾಸ್ಟಿಕ್ ಕಾಲುಗಳು ಇಲ್ಲದಿದ್ದರೂ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳುತ್ತೇವೆ ಎಂಬುದನ್ನು ಸಾಬೀತು ಮಾಡಿ ಸರ್ಕಾರದ ಕಣ್ಣು ತೆರೆಸಲು ನೀರಜ್ ಈ ಎಲ್ಲಾ ನೋವುಗಳನ್ನು ನುಂಗಿರುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು, ನೀರಜ್ ಸಾಧನೆಗೆ ಕುಟುಂಬಸ್ಥರೂ ಬೆಂಬಲವಾಗಿ ನಿಂತಿದ್ದಾರೆ. ನೀರಜ್ ಈ ಪರ್ವತದ ಮೇಲೆ ಹೋಗಿ ವಿಡಿಯೋ ಕರೆ ಮಾಡಿದ ನಂತರ ಇವರ ಖುಷಿಗೆ ಪಾರವೇ ಇಲ್ಲ. ಏಳನೇ ದಿನ ನೀರಜ್ ಮನೆಯವರಿಗೆ ಕರೆ ಮಾಡಿ ತಮ್ಮ ಸಾಧನೆಯ ವಿಷಯ ತಿಳಿಸಿದ್ದರು. ಅಲ್ಲಿ ತನಕ ಮನೆಯವರೂ ಆತಂಕದಿಂದ ಶುಭ ಸುದ್ದಿಗಾಗಿ ಕಾಯುತ್ತಲೇ ಇದ್ದರು.
ಚಿಕ್ಕಂದಿನಲ್ಲಿ ಚೆನ್ನಾಗಿಯೇ ಇದ್ದ ನೀರಜ್ ಅವರಿಗೆ 1996ರಲ್ಲಿ ಆರೋಗ್ಯದ ಸಮಸ್ಯೆ ಎದುರಾಗಿತ್ತು. ಈ ವೇಳೆ, ಇವರ ಕಾಲನ್ನು ಶಸ್ತ್ರಚಿಕಿತ್ಸೆಮೂಲಕ ತೆಗೆಯಲಾಗಿತ್ತು.ಇದಾದ ಬಳಿಕ ಮನೆಯವರು ನೀರಜ್ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರು.ಆದರೆ, ಈ ಚಿಂತೆಯನ್ನು ಈಗ ನೀರಜ್ ದೂರ ಮಾಡಿದ್ದಾರೆ ಮತ್ತು ಅದ್ಭುತವೊಂದನ್ನು ಸಾಧಿಸಿ ತೋರಿಸಿದ್ದಾರೆ.