ಸಂಜೆ ಆದ್ರೂ ಸಾಕು, ಏನಾದ್ರೂ ಬಿಸಿ ಬಿಸಿ ಚಾಟ್ಸ್ ತಿನ್ನಬೇಕೆಂದು ಎಲ್ಲಾ ರೀತಿಯ ವಯೋಮಾನದವರಿಗೆ ಇಷ್ಟವಾಗುತ್ತದೆ. ಆದ್ರೆ ಹೆಚ್ಚಾಗಿ ತಳ್ಳು ಗಾಡಿಯಲ್ಲಿ ಸಿಗುವ ಪಾನಿ ಪುರಿಯನ್ನು ತಿನ್ನಲು ಕೆಲವರು ಇಷ್ಟ ಪಡುತ್ತಾರೆ, ಕೆಲವರು ಇಷ್ಟ ಪಡುವುದಿಲ್ಲ.ಯಾಕೆಂದ್ರೆ ತಳ್ಳು ಗಾಡಿಯಲ್ಲಿನ ಸ್ವಚ್ಚತೆ ಕುರಿತು ಕೆಲವರಿಗೂ ಅನುಮಾನ. ಆದ್ರೂ ತಿನ್ನದೇ ಸುಮ್ಮನೆ ಇರಲಿಕ್ಕೆ ಆಗೋದಿಲ್ಲ.
ಇದಕ್ಕೆಲ್ಲಾ ಒಂದೇ ಪರಿಹಾರ. ನಿಮ್ಮ ಮನೆಯಲ್ಲೇ ಪಾನಿ ಪುರಿ ತಯಾರಿಸಿ. ಹಾಗಾದ್ರೆ “ಪಾನಿಪುರಿ” ತಯಾರಿಸಲು ಹೇಗೆಂದು ತಿಳಿಯಲು ಮುಂದೆ ಓದಿ…
ತಯಾರಿಸಲು ಬೇಕಾಗುವ ಸಾಮಗ್ರಿಗಳು:-
ಪಾನಿತಯಾರಿಸಲು ಕೊತ್ತಂಬರಿ ಸೊಪ್ಪು – 1 ಕಟ್ಟು
ಪುದೀನಾ ಸೊಪ್ಪು – 1 ಕಟ್ಟು
ಹಸಿಮೆಣಸಿನಕಾಯಿ – 2 ರಿಂದ 3
ಹುಣಸೆಹಣ್ಣು – ದೊಡ್ಡ ನಿಂಬೆಗಾತ್ರದಷ್ಟು
ನಿಂಬೆಹಣ್ಣು – 1
ಕಾಳುಮೆಣಸು – 2 ಟೀ ಚಮಚ
ಜೀರಿಗೆ – 2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕುದಿಸಿ ಆರಿಸಿದ ನೀರು – ಸುಮಾರು ಒಂದೂವರೆ ಲೀಟರ್
ಆಲೂ ಪಲ್ಯ ತಯಾರಿಸಲು:
ಒಂದು ದೊಡ್ಡ ಆಲೂಗಡ್ಡೆ
ಕೆಂಪು ಮೆಣಸಿನ ಪುಡಿ – 1 / 2 ಚಮಚ
ಕಾಳುಮೆಣಸಿನ ಪುಡಿ – 1 / 4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾವಿನ ಹಣ್ಣಿನ ಪುಡಿ – 1 / 4 ಚಮಚ /ನಾಲ್ಕಾರು ಹನಿ ನಿಂಬೆರಸ
ಈರುಳ್ಳಿ – 1
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
ತಯಾರಿಸುವ ವಿಧಾನ :
- ಕರಿಮೆಣಸು, ಜೀರಿಗೆಯನ್ನು ಹುರಿದು ಪುಡಿಮಾಡಿಕೊಳ್ಳಿ. ಹರಳು ಉಪ್ಪನ್ನು ಸೇರಿಸುವುದಾದರೆ ಅದನ್ನೂ ಸ್ವಲ್ಪ ಹುರಿದುಕೊಳ್ಳಬೇಕು.
- ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹುಣಸೆಹಣ್ಣು, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ರುಬ್ಬಿ, ಚೆನ್ನಾಗಿ ಸೋಸಿ ಇಟ್ಟುಕೊಳ್ಳಬೇಕು.
- ಸೋಸಿಕೊಂಡ ರಸಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ, ಪುಡಿಮಾಡಿದ ಜೀರಿಗೆ, ಕರಿಮೆಣಸನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ಕಲಸಬೇಕು. ಇದರ ರುಚಿ ಉಪ್ಪು, ಹುಳಿ, ಖಾರ ಹದವಾಗಿರಲಿ.
ಆಲೂ ಪಲ್ಯ :
- ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು.
- ಆಲೂಗಡ್ಡೆಯನ್ನು ಬೇಯಿಸಿ, ಕೈಗಳಿಂದ ಹಿಸುಕಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಬೇಕು.
- ಇದಕ್ಕೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಪುಡಿಮಾಡಿದ ಕಾಳುಮೆಣಸು, ಉಪ್ಪು, ಹುಳಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಮಾಡಬೇಕು.
- ಈಗ ಗೋಲ್ ಗಪ್ಪಾ ಅಥವಾ ಪೂರಿಯನ್ನು ತೆಗೆದುಕೊಂಡು ಕೈಯಿಂದ ಒತ್ತಿ ಒಂದು ಮೇಲ್ಮೈಯಲ್ಲಿ ತೂತು ಮಾಡಿಕೊಂಡು ಪೂರಿಯ ಅರ್ಧಭಾಗದವರೆಗೆ ಪಲ್ಯವನ್ನು ತುಂಬಿ, ನಂತರ ಉಳಿದರ್ಧಕ್ಕೆ ಪಾನಿಯನ್ನು ತುಂಬಿಸಿದರೆ ರುಚಿಕರವಾದ ಪಾನಿಪುರಿ ರೆಡಿ.