ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿ.ಆರ್.ಪಿ.ಎಫ್. ಯೋಧರಿದ್ದ ವಾಹನದ ಮೇಲೆ ಉಗ್ರರ ಆತ್ಮಾಹುತಿ ದಾಳಿ ನಡೆದು 42 ಮಂದಿ ವೀರ ಯೋಧರು ಹುತಾತ್ಮರಾದ ಘಟನೆ ಬಳಿಕ ಉಗ್ರಗಾಮಿಗಳು ಹಾಗೂ ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಭಾರತದಾದ್ಯಂತ ಕೇಳಿ ಬರುತ್ತಿದೆ.
ಕೇಂದ್ರ ಸರ್ಕಾರವು ಕೂಡ ಈಗಾಗಲೇ ಇದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪಾಕಿಸ್ತಾನವನ್ನು ಅತ್ಯಾಪ್ತ ರಾಷ್ಟ್ರಗಳ ಪಟ್ಟಿಯಿಂದ ಕೈಬಿಟ್ಟಿದೆಯಲ್ಲದೆ ಅಲ್ಲಿಂದ ಆಮದಾಗುವ ವಸ್ತುಗಳ ಮೇಲೆ ಶೇಕಡ 200 ರಷ್ಟು ಸುಂಕ ವಿಧಿಸುವ ಮೂಲಕ ಆರ್ಥಿಕ ಹೊಡೆತವನ್ನು ನೀಡಲು ಮುಂದಾಗಿದೆ.
ಇದರ ಜೊತೆಗೆ ಪ್ರತ್ಯೇಕತಾವಾದಿಗಳಿಗೆ ನೀಡಿದ ಭದ್ರತೆಯನ್ನು ಹಿಂಪಡೆಯಲಾಗಿದ್ದು, ಈ ಎಲ್ಲ ಬೆಳವಣಿಗೆಗಳ ನಡುವೆ ತಮ್ಮ ವಿರುದ್ಧ ಯಾವುದೇ ಸಮಯದಲ್ಲಿ ಭಾರತೀಯ ಸೇನೆಯಿಂದ ದಾಳಿ ನಡೆಯಬಹುದೆಂಬ ಭೀತಿಯಲ್ಲಿರುವ ರಣಹೇಡಿ ಉಗ್ರಗಾಮಿಗಳು, ಪಾಕ್ ಗಡಿಯಿಂದ ಸುರಕ್ಷಿತ ಸ್ಥಳಗಳಿಗೆ ಪರಾರಿಯಾಗಿದ್ದಾರೆಂದು ಹೇಳಲಾಗಿದೆ. ಪಾಕಿಸ್ತಾನ ಸೇನೆಯು ಇವರುಗಳ ಸುರಕ್ಷಿತ ಸ್ಥಳಾಂತರಕ್ಕೆ ನೆರವು ನೀಡಿದೆ ಎಂದು ವರದಿಯಾಗಿದೆ.