ಮಾಟಮಂತ್ರ ಮಾಡಿ ಸರ್ಕಾರ ಉಳಿಸಿಕೊಳ್ಳುವುದೇ ಹಾಗಿದ್ದರೆ ಜನರ ಬಳಿ ಏಕೆ ಹೋಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಶ್ನಿಸಿದರು.ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ಈ ಸದನವು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟಸಭೆಯಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದುವರೆಸಿದ ಮುಖ್ಯಮಂತ್ರಿಗಳು, ನಮ್ಮ ಕುಟುಂಬ ಮಾಟಮಂತ್ರ ಮಾಡುವ ಕುಟುಂಬವಲ್ಲ ಎಂದು ಹೇಳಿದರು.
ಆಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಬಗ್ಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಮುಖ್ಯಮಂತ್ರಿಗಳು, ರೇವಣ್ಣ ಅವರು ಪ್ರತಿ ದಿನವೂ ದೇವಾಲಯಕ್ಕೆ ಹೋಗುತ್ತಾರೆ.ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಿಂಬೆಹಣ್ಣು ಕೊಡುತ್ತಾರೆ. ಮಹಾಲಕ್ಷ್ಮಿ ದೇವಾಲಯದಲ್ಲಿ ಏಲಕ್ಕಿ ಹಾರ ಕೊಡುತ್ತಾರೆ. ಏಲಕ್ಕಿ ಹಾರವನ್ನು ರೇವಣ್ಣ ಅವರು ಕೊರಳಿಗೆ ಹಾಕಿಕೊಳ್ಳುತ್ತಾರೆ.
ದೇವಾಲಯದಲ್ಲಿ ಕೊಟ್ಟ ನಿಂಬೆಹಣ್ಣು ಪಡೆದ ಮಾತ್ರಕ್ಕೆ ಮಾಟಮಂತ್ರ ಮಾಡುತ್ತಾರೆ ಎಂದರೆ ಹೇಗೆ. ನಮ್ಮದು ಅಂತಹ ಕುಟುಂಬವಲ್ಲ. ನಾವು ದೇವರನ್ನು ನಂಬಿದ್ದೇವೆ. ದೇವರ ಮೇಲೆ ಭಯ ಭಕ್ತಿ ಇದೆ. ಪೂಜೆ ಮಾಡುತ್ತೇವೆ ಎಂದರು.ಬಿಜೆಪಿಯವರು ಹಿಂದೂ ಸಂಸ್ಕøತಿ ರಾಮನ ಬಗ್ಗೆ ಮಾತನಾಡುತ್ತೀರಿ. ನೀವು ರಾಮನ ಹೆಸರಿನಲ್ಲೇ ಅಧಿಕಾರಕ್ಕೆ ಬಂದವರು. ನೀವು ದೇವಾಲಯಕ್ಕೆ ಹೋಗುವುದಿಲ್ಲವೇ ಎಂದು ಛೇಡಿಸಿದರು.
ಹುಚ್ಚಾಸ್ಪತ್ರೆಗೆ ಸೇರುವ ಪರಿಸ್ಥಿತಿ ಬರುವುದಿಲ್ಲ:
ಯಂತಹ ಕಠಿಣ ಪರಿಸ್ಥಿತಿ ಸವಾಲು ಎದುರಾದರೂ ಎದುರಿಸುವಂತಹ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಭೂಮಿಯ ಮೇಲೆ ಬದುಕಿರುವವರೆಗೂ ತಾವು ಹುಚ್ಚಾಸ್ಪತ್ರೆಗೆ ಸೇರುವಂತಹ ಪರಿಸ್ಥಿತಿ ಬರುವುದಿಲ್ಲ. ಕುಮಾರಸ್ವಾಮಿ ಪರಿಸ್ಥಿತಿ ನೋಡಿದರೆ ಹುಚ್ಚಾಸ್ಪತ್ರೆಗೆ ಸೇರುವಂತಿದೆ ಎಂದು ಟೀಕಿಸಿದ್ದಾರೆ. ಇದಕ್ಕಾಗಿ ಇಂತಹ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದರು.
ಜನರಿಗೆ ದ್ರೋಹ ಮಾಡಬೇಡಿ:
ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕೆಂಬ ಆಸೆ ಇಲ್ಲ. ಈ ಸ್ಥಾನ ಅಪ್ರಸ್ತುತ. ನಿಮ್ಮನ್ನು ಆಯ್ಕೆ ಮಾಡಿದ ಜನರಿಗೆ ದ್ರೋಹ ಮಾಡಬೇಡಿ ಎಂದು ಶಾಸಕರಲ್ಲಿ ಮನವಿ ಮಾಡಿದರು. ನಮಗೆ ದ್ರೋಹ ಮಾಡಿದರೂ ಚಿಂತೆಯಿಲ್ಲ ಎಂದರು.ತಾವು ಮುಖ್ಯಮಂತ್ರಿ ಯಾದ ದಿನವೇ ಈ ಸ್ಥಾನ ಯಕಶ್ಚಿತ್ ಎಂದು ತಿಳಿದವನು. ನನಗೆ ಯಾವ ಆತಂಕವೂ ಇಲ್ಲ. ವಿಧಿಯಾಟ. ದೇವರು ಕೊಟ್ಟ ಪದವಿ ಇದು. ದೇವರ ಇಚ್ಛೆಯಂತೆ ಆಗಲಿ ಎಂದು ಹೇಳಿದರು.