ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಇಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಭೇಟಿ ಮಾಡಿ ಮಂಡ್ಯ ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆದ ಗೊಂದಲಗಳ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಮಾಹಿತಿ ತಿಳಿದುಕೊಳ್ಳಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾಗಿ ಅವರು ಹೇಳಿದ್ದಾರೆ
ನಮಗೆ ರಾತ್ರಿ 9.30 ಕ್ಕೆ ಪ್ರಚಾರ ನಿಲ್ಲಿಸುವಂತೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕುತ್ತಾರೆ. ಆದರೆ, ಜೆಡಿಎಸ್ ಅಭ್ಯರ್ಥಿ ರಾತ್ರಿ 11 ಗಂಟೆಯವರೆಗೂ ಪ್ರಚಾರ ನಡೆಸಿದರೂ, ಚುನಾವಣೆ ಅಧಿಕಾರಿಗಳು ತಡೆಯುವುದಿಲ್ಲ. ಬದಲಾಗಿ ನೋಡಿಕೊಂಡು ನಿಂತಿರುತ್ತಾರೆ ಎಂದು ಆರೋಪಿಸಿದ್ದಾರೆ.
ನಮ್ಮ ಪ್ರಚಾರಕ್ಕೆ ಸಮಯ ಮೀರಿದೆ ಎನ್ನುವ ಅಧಿಕಾರಿಗಳು ಜೆಡಿಎಸ್ ಅಭ್ಯರ್ಥಿ ಪ್ರಚಾರಕ್ಕೆ 11 ಗಂಟೆಯವರೆಗೂ ಅವಕಾಶ ನೀಡುತ್ತಾರೆ ಎಂದು ದೂರಿದ್ದಾರೆ.