ಎಐಸಿಸಿ ಸೋಶಿಯಲ್ ಮೀಡಿಯಾ ಉಸ್ತುವಾರಿಯಾಗಿರುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಸಂದರ್ಭದಲ್ಲಿ ಕಾಯಿಲೆ ನೆಪ ಹೇಳಿ, ಅಂತ್ಯಸಂಸ್ಕಾರದಿಂದ ದೂರ ಉಳಿದಿದ್ದರು.
ಅಂತ್ಯ ಸಂಸ್ಕಾರಕ್ಕೆ ಬಾರದ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಸ್ಪಷ್ಟನೆ ನೀಡಿದ್ದ ರಮ್ಯಾ ತಾವು ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಇದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ,
ಇದರ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳದಿದ್ದರೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದೆ. ಚಿಕಿತ್ಸೆ ಪಡೆಯುತ್ತಿರುವ ಕಾರಣ ಅಂಬರೀಶ್ ಅವರಿಗೆ ಅಂತಿಮ ನಮನ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಟ್ವೀಟ್ ಮಾಡಿದ್ದರು.
ಆದರೆ, ಒಂದು ತಿಂಗಳಲ್ಲಿಯೇ ಮಾರಣಾಂತಿಕ ಕಾಯಿಲೆಯಿಂದ ಚೇತರಿಸಿಕೊಂಡಿರುವ ರಮ್ಯಾ, ದುಬೈ ಪ್ರವಾಸಕ್ಕೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ದುಬೈ ಪ್ರವಾಸದಲ್ಲಿದ್ದು, ಅವರನ್ನು ಸ್ವಾಗತಿಸಲು ಒಂದು ದಿನ ಮೊದಲೇ ಅಲ್ಲಿಗೆ ರಮ್ಯಾ ತೆರಳಿದ್ದಾರೆ ಎಂದು ಹೇಳಲಾಗಿದೆ.