ಭಾರತವನ್ನು ಸ್ವಚ್ಛವಾಗಿಡಲು ಸ್ವಚ್ಛ ಭಾರತ್ ಅಭಿಯಾನದ ಹೆಸರಿನಲ್ಲಿ ವರ್ಷಗಳಿಂದ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ ವರ್ಷ ಭಾರತದಲ್ಲೆ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೆ ಸ್ಥಾನ ಪಡೆದುಕೊಂಡ ಛತ್ತೀಸ್‌ಗಢದ ಅಂಬಿಕಾಪುರ ಹೊಸತೊಂದು ಪ್ರಯತ್ನದ ಮೂಲಕ ವಿಶ್ವದ ಗಮನ ಸೆಳೆದಿದೆ.
ಹೌದು ಛತ್ತಿಸ್ಗಢದ ಅಂಬಿಕಾಪುರ ಸ್ವಚ್ಛತಾ ಕಾರ್ಯಗಳಲ್ಲಿ ಬೇರೆ ನಗರಗಳಿಗಿಂತ ಬಹಳ ಮುಂದುವರೆದಿದೆ. ಕಳೆದ ವರ್ಷ ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಗಳಿಸಿದೆ, ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ನಗರದಲ್ಲಿ ರಸ್ತೆ ನಿರ್ಮಿಸುವ ಮೂಲಕ ತ್ಯಾಜ್ಯ ನಿರ್ವಹಣೆಯ ಹೊಸ ಯೋಜನೆಗೆ ಮಾದರಿಯಾಗಿತ್ತು. ಇದೀಗ ಕಸ ವಿಲೇವಾರಿಗೆ ಹೊಸ ಯೋಜನೆ ರೂಪಿಸಿರುವ ನಗರ ಕಸ ಕೊಡಿ ಆಹಾರ ಸ್ವೀಕರಿಸಿ ಎಂಬ ವಿನೂತನ ಆಫರ್ ನೀಡಿದೆ.
ಕಸ ವಿಲೇವಾರಿ ಸಮಸ್ಯೆಯನ್ನು ಕಡಿಮೆ ಮಾಡಲು ವಿನೂತನ ಯೋಜನೆಯೊಂದನ್ನು ಶುರುಮಾಡಿದ್ದಾರೆ, ಅದೇನೆಂದರೆ, ಗಾರ್ಬೇಜ್ ಹೋಟೆಲ್. ಈ ಹೋಟೆಲ್ ನ ವಿಶೇಷತೆ ಏನೆಂದರೆ, ಇಲ್ಲಿ ಹಣದ ಬದಲಿಗೆ ಕಸವನ್ನು ಪಡೆಯಲಾಗುತ್ತದೆ. ಉದಾಹರಣೆಗೆ 500ಗ್ರಾಂ ಕಸ ತಂದವರಿಗೆ ತಿಂಡಿ, ಹಾಗು 1ಕೆಜಿ ಕಸ ತಂದವರಿಗೆ ಊಟವನ್ನು ಇಲ್ಲಿ ಉಚಿತವಾಗಿ ಕೊಡುತ್ತಾರಂತೆ.
ಈ ಹೋಟೆಲ್ ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ನಗರದ ಬಸ್ ನಿಲ್ದಾಣದ ಬಳಿ ಆರಂಭಿಸಬೇಕೆಂದು ಅಂಬಿಕಾಪುರದ ಪಾಲಿಕೆ ತೀರ್ಮಾನಿಸಿದೆ. ಈ ರೀತಿ ಮಾಡುವುದರಿಂದ ಎಲ್ಲೆಂದರಲ್ಲಿ ಕಸ ಹಾಕುವುದು ಕಡಿಮೆಯಾಗುತ್ತದೆ, ನಗರದಲ್ಲಿ ಸ್ವಚ್ಛತೆ ಕಾಪಾಡಲು ಸಹಾಯವಾಗುತ್ತದೆ.ಸಧ್ಯ ಈ ಯೋಜನೆ ಕಸ, ಪೇಪರ್ ಆಯುವವರಿಗೆ ಮೀಸಲಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ಪಾಲಿಕೆ ನಿರ್ಧರಿಸಿದೆ.