ಆಗ್ರಾ: ವಿಶ್ವದ ಅದ್ಭುತಗಳಲ್ಲಿ ಒಂದಾಂದ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಭೇಟಿ ನೀಡುವ ಪ್ರವಾಸಗರಿಗೆ ಶಾಕಿಂಗ್ ಸುದ್ದಿಯೊಂದು ಬಂದಿದ್ದು, ತಾಜ್ ಮಹಲ್ ನಲ್ಲಿ 3 ಗಂಟೆಗಿಂತ ಹೆಚ್ಚಿನ ಅವಧಿ ಕಳೆದರೆ ದಂಡ ವಿಧಿಸಲಾಗುತ್ತದೆಯಂತೆ…
ಹೌದು…. ಪ್ರೇಮಸೌಧ ತಾಜ್ ಮಹಲ್ ಗೆ ಭೇಟಿ ನೀಡುವ ಪ್ರವಾಸಿಗರು ತಾಜ್ ಮಹಲ್ ಪ್ರವೇಶ ಮಾಡಿದ ಮೂರುಗಂಟೆಯೊಳಗೆ ಅಲ್ಲಿಂದ ಹೊರಗೆ ಹೋಗಬೇಕು. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ. ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಹೊಸ ನಿಯಮದ ಆದೇಶ ಹೊರಡಿಸಿದ್ದು, ತಾಜ್ ಮಹಲ್ ಗೆ ಅನಧಿಕೃತ ಪ್ರವೇಶವನ್ನು ನಿಯಂತ್ರಿಸುವ ಸಲುವಾಗಿ ಈ ಹೊಸ ನಿಯಮವನ್ನು ಜಾರಿಗೆ ತಂದಿರುವುದಾಗಿ ಇಲಾಖೆ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಇಲಾಖೆಯ ಸೂಪರಿಂಟೆಂಟ್ ಬಸಂತ್ ಕುಮಾರ್ ಅವರು, ತಾಜ್ ಮಹಲ್ ನಲ್ಲಿ ಈ ಹಿಂದೆ ಪ್ರವಾಸಿಗರು ಬೆಳಗ್ಗಿನಿಂದ ಸಂಜೆಯವರೆಗೂ ಸಮಯ ಕಳೆಯಬಹುದಿತ್ತು. ಆದರೆ ಈ ವೇಳೆ ತಾಜ್ ಮಹಲ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತಿತ್ತು. ಅಲ್ಲದೆ ಅನಧಿಕೃತವಾಗಿ ಪ್ರವೇಶದ ಅವಕಾಶವೂ ಇತ್ತು. ಹೀಗಾಗಿ ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆತರಲಾಗಿದೆ. ಹೊಸ ನಿಯಮದ ಅನ್ವಯ ಪ್ರವಾಸಿಗರು ತಾಜ್ ಮಹಲ್ ನಲ್ಲಿ 3 ಗಂಟೆಗಳನ್ನು ಮಾತ್ರ ಕಳೆಯಬಹುದು. 3 ಗಂಟೆಗೂ ಅಧಿಕ ಸಮಯದ ಬಳಿಕ ದಂಡ ವಿಧಿಸಲಾಗುತ್ತದೆ. ಇದಕ್ಕಾಗಿ ಟರ್ನ್ ಸ್ಟೈಲ್ ಗೇಟ್ ಗಳನ್ನು ಪರಿಚಯಿಲಾಗುತ್ತಿದ್ದು, ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿ ಇವುಗಳನ್ನು ಅಳವಡಿಸಲಾಗುತ್ತದೆ. 7 ಗೇಟ್ ಗಳ ಪೈಕಿ 5 ಗೇಟ್ ಗಳು ಎಕ್ಸಿಟ್ ಗೆ ಮೀಸಲಿಡಲಾಗುತ್ತದೆ. ವಿದೇಶಿಗರ ಪ್ರವೇಶಕ್ಕೆ ಪ್ರತ್ಯೇಕ ಗೇಟ್ ಗಳು ಇರಲಿದ್ದು, ಟೋಕನ್ ಗಳ ಮೂಲಕವಷ್ಟೇ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಹೊಸ ನಿಯಮಕ್ಕೆ ಪ್ರವಾಸಿಗರ ತೀವ್ರ ವಿರೋಧ , ಇನ್ನು ಪುರಾತತ್ವ ಇಲಾಖೆಯ ಹೊಸ ನಿಯಮಕ್ಕೆ ಪ್ರವಾಸಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ನಾವು ತಾಜ್ ಮಹಲ್ ಸಮಯ ಕಳೆಯಲು ಬರುತ್ತೇವೆ. ಆದರೆ ಪುರಾತತ್ವ ಇಲಾಖೆಯ ಈ ನಿಯಮಗಳಿಂದ ಪ್ರವಾಸಿಗರು ತಾಜ್ ಮಹಲ್ ನಿಂದ ವಿಮುಖರಾಗುವ ಅಪಾಯವಿದೆ. ಕೇವಲ ಮೂರು ಗಂಟೆ ಮಾತ್ರ ಸಮಯಾವಕಾಶ ವಿಧಿಸಿದರೆ ತಾಜ್ ಮಹಲ್ ಗೆ ಆಗಮಿಸಲೂ ಕೂಡ ಪ್ರವಾಸಿಗರು ಎರಡೆರಡು ಬಾರಿ ಯೋಚಿಸುತ್ತಾರೆ. ಇದು ನಿಜಕ್ಕೂ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಅಸ್ಟ್ರೇಲಿಯಾ ಮೂಲದ ಸೆಲಿನಾ ಎಂಬ ಪ್ರವಾಸಿಗರೂ ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಭಾರತೀಯ ಪ್ರವಾಸಗರಿಗಿಂತ ವಿದೇಶಗರಿಗೆ ಬಹುತೇಕ 10 ಪಟ್ಟು ಹೆಚ್ಚು ಶುಲ್ಕು ವಿಧಿಸುತ್ತಿದ್ದಾರೆ. ಅದಾಗ್ಯೂ ನಾವು ಇಲ್ಲಿಗೆ ಬರುತ್ತಿದ್ದೇವೆ. ಆದರೆ ಇದೀಗ ಸಮಯದ ಮಿತಿ ವಿಧಿಸಿರುವುದು ನಾವು ಮತ್ತೆ ತಾಜ್ ಮಹಲ್ ಗೆ ಭೇಟಿ ನೀಡಬೇಕೆ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.