ಸುದ್ದಿ

ತನ್ನ ಕಣ್ಣಿನಿಂದಲೇ ಹುಲಿಯನ್ನು ದಿಟ್ಟಿಸಿ ನೋಡಿ ಓಡಿಸಿದ ಮಹಿಳಾ ಅಧಿಕಾರಿ..!

By admin

January 11, 2019

ಕಾಡಿನಲ್ಲಿ ಹುಲಿ ಎದುರಾದರೆ ಯಾರಾದರೂ ಜೀವಭಯದಿಂದ ಓಡಿ ದಿಕ್ಕಾಪಾಲಾಗುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಹುಲಿ ಎದುರಾದರೂ ಕದಲದೇ ನಿಂತು ಅದನ್ನು ದಿಟ್ಟಿಸಿ ಹಿಮ್ಮೆಟ್ಟಿಸಿದ್ದಾಳೆ.

ಝೂಗಳಲ್ಲಿ ಬಂಧಿಯಾಗಿರುವ ಹುಲಿಗಳನ್ನು ನೋಡಿದರೇ ಮೈ ಜುಮ್ಮೆನ್ನುತ್ತದೆ. ಅಂಥದ್ದರಲ್ಲಿ ಕಾಡಿಗೆ ಹೋದಾಗ ಕಣ್ಣೆದುರೇ ಬಂದ ಹುಲಿಯನ್ನು ಮಹಿಳಾ ಅರಣ್ಯಾಧಿಕಾರಿಯೊಬ್ಬರು ಒಂದೂವರೆ ಗಂಟೆಗಳ ಕಾಲ ದಿಟ್ಟಿಸಿ ನೋಡುತ್ತಾ, ಹುಲಿಯನ್ನೇ ಹೆದರಿಸಿ ಓಡಿಸಿದ ಅಚ್ಚರಿಯ ಘಟನೆ ಮಧ್ಯಪ್ರದೇಶ ಸಾತ್ಪುರ ಹುಲಿ ರಕ್ಷಿತಾರಣ್ಯದಲ್ಲಿ ನಡೆದಿದೆ.

ಇತ್ತೀಚೆಗೆ ಹುಲಿ ಗಣತಿಗೆಂದು ಮಹಿಳಾ ಅರಣ್ಯಾಧಿಕಾರಿಯೊಬ್ಬರು, ಇಬ್ಬರು ಪುರುಷ ಗಾರ್ಡ್‌ಗಳ ಜೊತೆ ಮಧ್ಯಪ್ರದೇಶದ ಹೋಷಂಗಾಬಾದ್ ಎಂಬಲ್ಲಿನ ‘ಸತ್ಪುರ ಟೈಗರ್ ರಿಸರ್ವ್’ಗೆ ಹೋಗಿದ್ದರು.ಈ ವೇಳೆ ಹುಲಿಯೊಂದು ಏಕಾಏಕಿ ಪೊದೆಯೊಳಗಿಂದ ಪ್ರತ್ಯಕ್ಷವಾಗಿ, ಗಣತಿಗೆಂದು ಬಂದಿದ್ದವರ ಮುಂದೆ ಘರ್ಜಿಸಲು ಆರಂಭಿಸಿತು.ಹುಲಿ ಮತ್ತು ಇವರ ನಡುವೆ ಕೇವಲ 10 ಮೀಟರ್‌ ಅಂತರವಿತ್ತು.

ಹುಲಿಯ ಘರ್ಜನೆ ಕೇಳಿದ್ದೇ ತಡ ಇಬ್ಬರೂ ಪುರುಷ ಗಾರ್ಡ್‌ಗಳು ತತ್ತರಿಸಿ ಹೋಗಿದ್ದರು.ಆಗ ಈಕೆ ತನ್ನ ಸಹೋದ್ಯೋಗಿಗಳಿಬ್ಬರಿಗೆ ಒಂದಿಂಚೂ ಕದಲದೇ ನಿಲ್ಲಿ ಎಂದಿದ್ದಾಳೆ. ಜೊತೆಗೆ ತಾನೂ ಕದಲದೇ ಹುಲಿಯನ್ನೇ ದಿಟ್ಟಿಸಿದ್ದಾಳೆ.

ಹೀಗೆ ಒಂದೆರಡು ನಿಮಿಷವಲ್ಲ, ಒಂದೂವರೆ ಗಂಟೆ ಕಳೆದ ಇವರು ಕೊನೆಗೂ ಹುಲಿಯನ್ನು ಹಾಗೆ ದಿಟ್ಟಿಸಿಯೇ ಹಿಮ್ಮೆಟ್ಟಿಸಿದ್ದಾರೆ.ಈ ಘಟನೆಯಿಂದ ಬೆಚ್ಚಿದ ಹುಲಿ, ಒಂದೂವರೆ ಗಂಟೆಗಳ ಬಳಿಕ ಸುಮ್ಮನೆ, ಮತ್ತೆ ಕಾಡಿನೊಳಗೆ ಸೇರಿಕೊಂಡಿತು.

ಮಹಿಳಾ ಅಧಿಕಾರಿಯ ಈ ಧೈರ್ಯ ಆಕೆಯ ಸಮಯಪ್ರಜ್ಞೆ ಹಾಗೂ ಸಾಮಾನ್ಯ ಜ್ಞಾನದಿಂದ ಮೂವರ ಪ್ರಾಣ ಕಾಪಾಡಿದೆ.ಮಹಿಳಾ ಅಧಿಕಾರಿಯ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.