ಹಣ ಕಾಸು

ಡೆಬಿಟ್‌ ಕಾರ್ಡ್‌ ಪಾವತಿಗಿನ್ನು ವ್ಯವಹಾರ ಶುಲ್ಕ ಇಲ್ಲ..!ತಿಳಿಯಲು ಈ ಲೇಖನ ಓದಿ..

By admin

January 02, 2018

ಡೆಬಿಟ್ ಕಾರ್ಡ್, ಭೀಮ್ ಸೇರಿದಂತೆ ಆನ್ ಲೈನ್ ವಹಿವಾಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಇತರೆ ಆಪ್ ಗಳನ್ನು ಬಳಸುತ್ತಿದ್ದವರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ.

2018ರ ಜನವರಿ 1ರಿಂದ ಮುಂದಿನ ಎರಡು ವರ್ಷಗಳ ಕಾಲ ಡೆಬಿಟ್‌ ಕಾರ್ಡ್‌, ಭೀಮ್‌ ಯುಪಿಐ ಮತ್ತು ಎಇಪಿಎಸ್‌ ಮೂಲಕ ನಡೆಯುವ  2,000 ರೂ. ವರೆಗಿನ ವ್ಯವಹಾರಗಳ ಶುಲ್ಕ ವೆಚ್ಚವನ್ನು ಸರಕಾರವೇ ಭರಿಸಲಿದೆ ಮತ್ತು ಬ್ಯಾಂಕುಗಳಿಗೆ ಅದನ್ನು ಮರುಪಾವತಿಸಲಿದೆ. ಈ ಮಹತ್ವದ ನಿರ್ಧಾರವನ್ನು ಇಂದು ಕೇಂದ್ರ ಸಚಿವ ಸಂಪುಟ ಕೈಗೊಂಡಿತು.

ದೇಶಾದ್ಯಂತ ಆನ್ ಲೈನ್ ವಹಿವಾಟು ಹೆಚ್ಚುತ್ತಿದ್ದು, ಇದಕ್ಕೆ ಉತ್ತೇಜನ ನೀಡುವ ಸಲುವಾಗಿ ಹಣಕಾಸು ಇಲಾಖೆ ಈ ತೀರ್ಮಾನ ಕೈಗೊಂಡಿದ್ದು, ಡಿಸೆಂಬರ್ ತ್ರೈಮಾಸಿಕದಲ್ಲಿ ಭೀಮ್ ವಹಿವಾಟಿನಲ್ಲಿ ಶೇ.86 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

 

ಆನ್ ಲೈನ್ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 2 ಸಾವಿರ ರೂ.ವರೆಗಿನ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲವೆನ್ನಲಾಗಿದ್ದು, ಇದರಿಂದ ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.

ಇನ್ನು ಮುಂದೆ ವರ್ಷಕ್ಕೆ 20 ಲಕ್ಷ ರೂ. ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಪಾಯಿಂಟ್‌ ಆಫ್ ಸೇಲ್‌ ಮಶೀನ್‌ನಲ್ಲಿ ನಡೆಸುವ ಹಣಕಾಸು ವ್ಯವಹಾರಕ್ಕೆ ಶೇ.0.40 ಎಂಡಿಆರ್‌   ಶುಲ್ಕವನ್ನು ವಿಧಿಸಲಾಗುವುದು ಮತ್ತು ಇದರ ಗರಿಷ್ಠ ಮಿತಿಯನ್ನು ತಲಾ ವ್ಯವಹಾರದ ಮೇಲೆ 200 ರೂ.ಗೆ ನಿಗದಿಸಲಾಗಿದೆ ಎಂದು ಹೊಸ ಅಧಿಸೂಚನೆ ತಿಳಿಸಿದೆ.

ವರ್ಷಕ್ಕೆ 20 ಲಕ್ಷ ಮೀರಿ ವಹಿವಾಟು ನಡೆಸುವ ಮಧ್ಯಮ ಮಟ್ಟದ ವ್ಯಾಪಾರಿಗಳಿಗೆ ತಲಾ 1,000 ರೂ. ವಹಿವಾಟಿನ ಮೇಲೆ ಶೇ.0.90 ಎಂಡಿಆರ್‌ ಶುಲ್ಕವಿದೆ. ಕ್ಯೂಆರ್‌ ಕೋಡ್‌ ಮೂಲಕ ವ್ಯವಹರಿಸಿದಲ್ಲಿ ಶೇ.0.80 ಎಂಡಿಆರ್‌ ಅನ್ವಯವಾಗುತ್ತದೆ.