ಸರ್ಕಾರಿ ಯೋಜನೆಗಳು

ಜೂನ್‌ ತಿಂಗಳಿನಿಂದ ಸರ್ಕಾರಿ ಬಸ್ ಪ್ರಯಾಣ ದರ ಶೇ 20ರಷ್ಟು ಏರಿಕೆ …!

By admin

May 25, 2019

ಬೆಂಗಳೂರು, ಮೇ 25: ಮುಂದಿನ ತಿಂಗಳಿನಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಹಾಲಿ ಟಿಕೆಟ್ ದರಕ್ಕಿಂತ ಶೇ 20ರಷ್ಟು ದರವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜ್ ಹೇಳಿದ್ದಾರೆ.

ಕಳೆದ ಏಳು ವರ್ಷಗಳಿಂದ ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡಿಲ್ಲ. ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರಿ ಹೆಚ್ಚಳವಾಗಿವೆ. ಸಾರಿಗೆ ಸಂಸ್ಥೆಗಳ ವೆಚ್ಚ, ಕಾರ್ಮಿಕರ ಸಂಬಳ, ನಿರ್ವಹಣೆ ಮುಂತಾದವುಗಳನ್ನು ನಿಭಾಯಿಸಲು ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕಾಗಿ ಟಿಕೆಟ್ ದರ ಏರಿಕೆ ಮಾಡಬೇಕಿದ. ದರ ಹೆಚ್ಚಳದ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಬಸ್ ದರ ಹೆಚ್ಚಳದ ಸುಳಿವು ನೀಡಿದ್ದರು. ‘ಪ್ರಯಾಣ ದರ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಬೇಕು’ ಎಂದು ಹೇಳಿದ್ದರು.

ಬಿಎಂಟಿಸಿ ಪ್ರತಿ ವರ್ಷ 200 ಕೋಟಿ ನಷ್ಟ ಅನುಭವಿಸುತ್ತಿದೆ. ಆಡಳಿತದಲ್ಲಿನ ದೋಷ, ಅವ್ಯವಹಾರದಿಂದಾಗಿ ನಿಗಮ ನಷ್ಟದ ಹಾದಿ ಹಿಡಿದಿದೆ. ದರ ಹೆಚ್ಚಳ ಮಾಡಲು ಅನುಮತಿ ನೀಡದಿದ್ದರೆ ನಷ್ಟದಲ್ಲಿರುವ ಸಂಸ್ಥೆ ನಡೆಸಲು ಆರ್ಥಿಕ ನೆರವು ನೀಡುವಂತೆ ಕೇಳಿದ್ದೇನೆ’ ಎಂದು ತಿಳಿಸಿದ್ದರು.