ಸುದ್ದಿ

ಚಳ್ಳಕೆರೆಯ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಪ್ರಯತ್ನ…..!

By admin

June 04, 2019

ಒಂದೇ ಕುಟುಂಬದ ಐವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗದ ಚಳ್ಳಕೆರೆಯ ನೆಹರು ಸರ್ಕಲ್ ಬಳಿ ನಡೆದಿದೆ.

ಮೂವರು ಅಪ್ರಾಪ್ತ ಮಕ್ಕಳು ಸೇರಿದಂತೆ ಶಿಲ್ಪಾ ಹಾಗೂ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಐವರು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ನಿವಾಸಿಗಳಾಗಿದ್ದು, ಖಾಲಿ ನಿವೇಶನದ ಹಕ್ಕು ಪತ್ರ ಮಾಡಿಕೊಡದೆ ಆರು ತಿಂಗಳಿಂದ ಸತಾಯಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗ್ರಾಮ ಪಂಚಾಯ್ತಿ ಪಿಡಿಓ ಪ್ರತಿಭಾ ಹಾಗೂ ಬಿಲ್ ಕಲೆಕ್ಟರ್ ಮಂಜುನಾಥ್ ನಿರ್ಲಕ್ಷ್ಯಕ್ಕೆ ಮನನೊಂದು ಕುಟುಂಬ ಈ ನಿರ್ಧಾರ ಕೈಗೊಂಡಿದೆ. ಅಲ್ಲದೆ ನಿವೇಶನಕ್ಕಾಗಿ ಸ್ಥಳೀಯರ ಕಿರುಕುಳ ಕೂಡ ತಾಳಲಾರದೇ ಮಂಜುನಾಥ್ ಕುಟುಂಬ ಕಂಗಾಲಾಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರ ನೆರವಿನಿಂದ ಈ ಅನಾಹುತ ತಪ್ಪಿದೆ.

ಮಂಜುನಾಥ್ ತಂದೆ ನಿಂಗಪ್ಪನವರ ಹೆಸರಿನಲ್ಲಿ ಈ ಖಾಲಿ ನಿವೇಶನ ಇತ್ತು. ತಿಮ್ಮಣ್ಣನ ಮಕ್ಕಳಿಂದ ಮಂಜುನಾಥ್ ಮೇಲೆ ದೌರ್ಜನ್ಯ ಹಾಗೂ ಅಕ್ರಮ ನಿವೇಶನ ಬಳಕೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.