ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದಕ್ಕೆ ನಟ ಪ್ರಕಾಶ್ ರೈ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ, ಫಲಿತಾಂಶದಿಂದ ನಿಮಗೆ ನಿಜವಾಗಿಯೂ ತೃಪ್ತಿಯಾಗಿದೆಯೇ ಎಂದೂ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಮುಖ್ಯವಾಗಿ ಹಲವು ವಿಚಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುತ್ತಿರುವ ವಿಧಾನ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಇದೀಗ ಮತ್ತೊಂದು ಪ್ರಶ್ನೆಯನ್ನು ಪ್ರಧಾನಿ ಮೋದಿ ಅವರಿಗೆ ಕೇಳಿದ್ದಾರೆ ಪ್ರಕಾಶ್ ರೈ.
‘ನನ್ನ ಪ್ರೀತಿಯ ಪ್ರಧಾನ ಮಂತ್ರಿಯವರೇ, ಗೆದ್ದಿದ್ದಕ್ಕೆ ಅಭಿನಂದನೆಗಳು. ಆದರೆ ಈ ಫಲಿತಾಂಶದಿಂದ ನೀವು ನಿಜವಾಗಿಯೂ ಸಂತೋಷವಾಗಿದ್ದೀರಾ? 150 ಪ್ಲಸ್ ಸೀಟು ಗೆಲ್ಲುತ್ತೀವಿ ಎಂದಿದ್ದಿರಲ್ಲವೇ. ಏನಾಯಿತು?
ಒಂದು ಕ್ಷಣ ಅವಲೋಕನ ಮಾಡಿಕೊಳ್ಳುವಿರೇ… ಎ) ವಿಭಜಿಸುವ ರಾಜಕೀಯ ಕೆಲಸ ಮಾಡಲಿಲ್ಲ. ಬಿ) ಪಾಕಿಸ್ತಾನ, ಧರ್ಮ, ಜಾತಿ, ಬೆದರಿಕೆಯೊಡ್ಡುವ ಸಂಘಟನೆಗಳಿಗೆ ಬೆಂಬಲ ನೀಡುವುದು, ವೈಯಕ್ತಿಕ ಜಿದ್ದು ಹೆಚ್ಚಿಸಿಕೊಳ್ಳಲು ಯತ್ನಿಸುವುದು, ಇವುಗಳೆಲ್ಲದಕ್ಕಿಂತಲೂ ದೊಡ್ಡ ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ.
ಸಿ) ಇಲ್ಲಿ ಸಾಕಷ್ಟು ಗ್ರಾಮೀಣ ಸಮಸ್ಯೆಗಳಿವೆ.. ಕಡೆಗಣನೆಗೊಳಗಾದ ರೈತರು, ಬಡವರು, ಗ್ರಾಮೀಣ ಭಾರತದ ಧ್ವನಿ ಸ್ವಲ್ಪ ದೊಡ್ಡದಾಗಿದೆ.