ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಾದ ಬ್ರಿಜೇಶ್ ಶ್ರೀವಾತ್ಸವ ಮತ್ತವರ ಪತ್ನಿ ಶಬೀಸ್ತಾ ಶ್ರೀವಾತ್ಸವ ತಾವು ಸಾಕಿರುವ ಮಂಗನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಂಗನ ವಾಸ್ತವ್ಯಕ್ಕೆ ಎಸಿ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.
ಮಂಗಕ್ಕೆ ಎಸಿ ಕೊಠಡಿ ನಿರ್ಮಿಸಿ ಮಗನಂತೆ ನೋಡಿಕೊಳ್ಳುತ್ತಿರುವುದಕ್ಕೆ ಹಲವರು ನಮ್ಮನ್ನು ಹುಚ್ಚರೆಂದು ಕರೆಯುತ್ತಾರೆಂದು ಹೇಳುವ ದಂಪತಿಗಳು, ಇದಕ್ಕೆ ತಾವು ತಲೆ ಕೆಡಿಸಿಕೊಳ್ಳುವುದಿಲ್ಲವೆಂದಿದ್ದಾರೆ. ತಮ್ಮ ನಿಧನ ನಂತರವೂ ಚುನ್ಮುನ್ ಸುಖವಾಗಿರಬೇಕೆಂಬ ಕಾರಣಕ್ಕೆ ಈಗಲೇ ಅದಕ್ಕೆ ತಕ್ಕ ಸಿದ್ದತೆಗಳನ್ನು ಮಾಡಿಟ್ಟಿದ್ದಾರೆ. ಚುನ್ಮುನ್ ಗೆ ಚೈನೀಸ್ ಆಹಾರ ಇಷ್ಟವೆಂದು ಹೇಳುವ ದಂಪತಿಗಳು ಚುನ್ಮುನ್ ಗೆ ಸಂಗಾತಿಯನ್ನೂ ಹುಡುಕಿ ಕೊಟ್ಟಿದ್ದಾರೆ.
ಟ್ರಸ್ಟ್ ಒಂದನ್ನು ಸ್ಥಾಪಿಸಿರುವ ದಂಪತಿಗಳು ತಮ್ಮ ಮರಣದ ಬಳಿಕ ಎಲ್ಲಾ ಆಸ್ತಿಯನ್ನು ಈ ಟ್ರಸ್ಟ್ ಗೆ ಹೋಗುವ ವ್ಯವಸ್ಥೆ ಮಾಡಿದ್ದಾರೆ. ಅದರಿಂದ ಬರುವ ಹಣದಲ್ಲಿ ಮಂಗಗಳನ್ನು ಸಂರಕ್ಷಣೆ ಮಾಡಬೇಕೆಂಬುದು ಈ ದಂಪತಿಗಳ ಹೆಬ್ಬಯಕೆ. ತಮ್ಮ ದತ್ತು ಪುತ್ರ ಚುನ್ಮುನ್ ನನ್ನು ಹೆತ್ತ ಕಂದನಂತೆ ಪ್ರೀತಿಸುತ್ತಿರುವ ದಂಪತಿಗಳು ತಮ್ಮ ಸಿರಿ ಸಂಪತ್ತಿಗೆಲ್ಲ ಚುನ್ಮುನ್ ಕಾರಣವೆಂದು ಬಲವಾಗಿ ನಂಬಿದ್ದಾರೆ.
ಹಿಂದೂವಾದ ಬ್ರಿಜೇಶ್, ಮುಸ್ಲಿಂ ಯುವತಿ ಶಬೀಸ್ತಾ ಅವರನ್ನು ಮದುವೆಯಾದ ಕಾರಣಕ್ಕಾಗಿ ಇಬ್ಬರ ಕುಟುಂಬದವರೂ ಅವರನ್ನು ಹಲವಾರು ವರ್ಷಗಳ ಹಿಂದೆಯೇ ದೂರ ಮಾಡಿದ್ದರು. ಈ ವೇಳೆ ಈ ಮಂಗ ಅವರ ಪಾಲಿನ ಅದೃಷ್ಟದ ಸಂಕೇತದಂತೆ ಬಂದಿತಂತೆ. ಚುನ್ಮುನ್ ಎಂದು ಇದಕ್ಕೆ ದಂಪತಿಗಳು ಹೆಸರಿಟ್ಟಿದ್ದು ಚುನ್ಮುನ್ ಬಂದ ಮೇಲೆಯೇ ತಮಗೆ ಶ್ರೀಮಂತಿಕೆ ಬಂದಿತೆಂದು ದಂಪತಿಗಳು ಹೆಮ್ಮೆಯಿಂದ ಹೇಳುತ್ತಾರೆ.